ದೇಶ

ಕೋವಿಡ್ ನಿಯಮ ಪಾಲಿಸಿ, ಇಲ್ಲದಿದ್ದರೆ ರ್ಯಾಲಿಗಳನ್ನು ನಿಷೇಧಿಸುತ್ತೇವೆ: ರಾಜಕೀಯ ಪಕ್ಷಗಳಿಗೆ ಚುನಾವಣಾ ಆಯೋಗ ಎಚ್ಚರಿಕೆ 

Sumana Upadhyaya

ನವದೆಹಲಿ: ದೇಶದೆಲ್ಲೆಡೆ ಹೆಚ್ಚಾಗುತ್ತಿರುವ ಕೊರೋನಾ ಸೋಂಕಿನ ಮಧ್ಯೆ, ಮಾಸ್ಕ್ ಇಲ್ಲದೆ, ಸಾಮಾಜಿಕ ಅಂತರ ಕಾಪಾಡದೆ ಪ್ರಮುಖ ಪ್ರಚಾರಕರು, ರಾಜಕಾರಣಿಗಳು ಚುನಾವಣಾ ರ್ಯಾಲಿಗಳಲ್ಲಿ ಪ್ರಚಾರ ಮಾಡುತ್ತಿರುವ ಬಗ್ಗೆ ಚುನಾವಣಾ ಆಯೋಗ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

ಕೋವಿಡ್ ನಿಯಮ ಉಲ್ಲಂಘಿಸಿದರೆ ಚುನಾವಣಾ ರ್ಯಾಲಿಗಳನ್ನು ನಿಷೇಧಿಸುವುದಕ್ಕೆ ಹಿಂದೇಟು ಹಾಕುವುದಿಲ್ಲ ಎಂದು ಸಹ ಎಚ್ಚರಿಕೆ ನೀಡಿದೆ. ಈ ಬಗ್ಗೆ ಎಲ್ಲಾ ಪ್ರಮುಖ ರಾಜಕೀಯ ಪಕ್ಷಗಳ ನಾಯಕರುಗಳಿಗೆ ಪತ್ರ ಬರೆದಿರುವ ಚುನಾವಣಾ ಆಯೋಗ, ಇತ್ತೀಚಿನ ವಾರಗಳಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿವೆ. ಆದರೆ ಚುನಾವಣಾ ರ್ಯಾಲಿಗಳು, ಪ್ರಚಾರಗಳಲ್ಲಿ ಸಾಮಾಜಿಕ ಅಂತರ, ಮಾಸ್ಕ್ ಕಡ್ಡಾಯವಾಗಿ ಧರಿಸುವ ನಿಯಮವನ್ನು ಗಾಳಿಗೆ ತೂರಲಾಗುತ್ತಿದೆ, ಚುನಾವಣಾ ಆಯೋಗದ ನಿಯಮಗಳನ್ನು ಧಿಕ್ಕರಿಸಲಾಗುತ್ತಿದೆ. ಕೋವಿಡ್-19 ಶಿಷ್ಠಾಚಾರಗಳನ್ನು ಉಲ್ಲಂಘಿಸಲಾಗುತ್ತಿದೆ, ಪ್ರಮುಖ ಪ್ರಚಾರಕರು, ರಾಜಕೀಯ ನಾಯಕರು ಸಹ ವೇದಿಕೆಗಳಲ್ಲಿ ಇರುವಾಗ ಮಾಸ್ಕ್ ಧರಿಸುತ್ತಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದೆ.

ಹೀಗೆ ಅಸಡ್ಡೆ ಧೋರಣೆ ತಳೆಯುವುದರಿಂದ ರಾಜಕೀಯ ನಾಯಕರು, ಅಭ್ಯರ್ಥಿಗಳು ತಮ್ಮನ್ನು ಮತ್ತು ರ್ಯಾಲಿಗಳಲ್ಲಿ ಭಾಗವಹಿಸುವ ಜನರನ್ನು ಅಪಾಯಕ್ಕೆ ತಳ್ಳುತ್ತಿದ್ದಾರೆ  ಎಂದು ಆಯೋಗ ಪತ್ರದಲ್ಲಿ ವಿವರಿಸಿದೆ.

ಇನ್ನು ಮುಂದೆ ನಿಯಮ ಉಲ್ಲಂಘಿಸಿದರೆ ಸಾರ್ವಜನಿಕ ಸಭೆ, ರ್ಯಾಲಿಗಳನ್ನು ನಿಷೇಧಿಸುವುದಕ್ಕೆ ಹಿಂದೇಟು ಹಾಕುವುದಿಲ್ಲ, ಕೋವಿಡ್-19 ಶಿಷ್ಠಾಚಾರ ಉಲ್ಲಂಘಿಸುವ ಅಭ್ಯರ್ಥಿಗಳು, ರಾಜಕೀಯ ನಾಯಕರು ಮತ್ತು ಪಕ್ಷಗಳ ವಿರುದ್ಧ ಯಾವುದೇ ಹೆಚ್ಚಿನ ಉಲ್ಲೇಖಗಳಿಲ್ಲದೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದೆ.

ನಿನ್ನೆ ಚುನಾವಣಾ ಆಯೋಗ ಮತ್ತು ಕೇಂದ್ರ ಸರ್ಕಾರಕ್ಕೆ ನೊಟೀಸ್ ನೀಡಿದ್ದ ದೆಹಲಿ ಹೈಕೋರ್ಟ್ ರಾಜಕೀಯ ರ್ಯಾಲಿಗಳಲ್ಲಿ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಬಗ್ಗೆ ಪ್ರತಿಕ್ರಿಯೆ ಕೇಳಿತ್ತು.

SCROLL FOR NEXT