ದೇಶ

ಕುಂಭಮೇಳ 2021: ಎರಡನೇ ಶಾಹಿ ಸ್ನಾನದ ವೇಳೆ ವ್ಯಕ್ತಿಗಳ ನಡುವೆ ಅಂತರ ಅಸಾಧ್ಯ; ಅಧಿಕಾರಿ ಹೇಳಿಕೆ

Srinivas Rao BV

ಹರಿದ್ವಾರ: ಉತ್ತರಾಖಂಡ್ ನ ಹರಿದ್ವಾರದಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ಲಕ್ಷಾಂತರ ಮಂದಿ ಸೇರಿದ್ದಾರೆ. ಗಂಗಾನದಿಯ ಹರ್ ಕಿ ಪೌರಿ ಘಾಟ್ ನಲ್ಲಿ ಪವಿತ್ರ ಸ್ನಾನ ಮಾಡುವುದಕ್ಕೆ ಜನಸ್ತೋಮ ಸೇರಿದ್ದು ಎರಡನೇ ಶಾಹಿ ಸ್ನಾನದ ವೇಳೆ ವ್ಯಕ್ತಿಗಳ ನಡುವೆ ಅಂತರ ಅಸಾಧ್ಯ ಎಂದು ಕುಂಭ ಮೇಳ ಐಜಿ ಸಂಜಯ್ ಗುಂಜ್ಯಾಲ್ ತಿಳಿಸಿದ್ದಾರೆ. 

ಕೋವಿಡ್-19 ಗೆ ಮುನ್ನೆಚ್ಚರಿಕೆ ಕೈಗೊಳ್ಳುವಂತೆ ಜನತೆಯಲ್ಲಿ ನಿರಂತರ ಮನವಿ ಮಾಡುತ್ತಿದ್ದೇವೆ. ಆದರೆ ಭಾರಿ ಜನಸಂದಣಿಯಿಂದಾಗಿ ಚಲನ್ ನೀಡುವುದಕ್ಕೆ ಸಾಧ್ಯವಾಗುತ್ತಿಲ್ಲ. ಘಾಟ್ ಗಳಲ್ಲಿ ಅಂತರ ಕಾಯ್ದುಕೊಳ್ಳುವುದು ಅತ್ಯಂತ ಕಷ್ಟವಾಗಿದೆ ಎಂದು ಹೇಳಿದ್ದಾರೆ.

"ಘಾಟ್ ಗಳಲ್ಲಿ ಒತ್ತಾಯಪೂರ್ವಕವಾಗಿ ಅಂತರ ಕಾಯ್ದುಕೊಳ್ಳುವುದಕ್ಕೆ ಯತ್ನಿಸಿದರೆ ಕಾಲ್ತುಳಿತದಂತಹ ಪರಿಸ್ಥಿತಿ ಉಂಟಾಗಬಹುದು ಆದ್ದರಿಂದ ಪರಸ್ಪರ ಅಂತರ ಕಾಯ್ದುಕೊಳ್ಳುವುದಕ್ಕೆ ಸಾಧ್ಯವಾಗುತ್ತಿಲ್ಲ"ಎಂದು ಐ ಜಿ ಹೇಳಿದ್ದಾರೆ. ಎರಡನೇ ಶಾಹಿ ಸ್ನಾನದ ಅಂಗವಾಗಿ ಸೋಮವಾರ (ಏ.12) ರಂದು ಭಕ್ತಾದಿಗಳು ಹರ್ ಕಿ ಪೌರಿ ಘಾಟ್ ನಲ್ಲಿ ಗಂಗಾನದಿಯಲ್ಲಿ ಮಿಂದಿದ್ದಾರೆ. 

ಬೆಳಿಗ್ಗೆ 7 ವರೆಗೂ ಸಾರ್ವಜನಿಕರಿಗೆ ಪ್ರವೇಶವಿರಲಿದೆ. ಆ ಬಳಿಕ ಅಖಾಡಗಳಿಗೆ ಪ್ರದೇಶವನ್ನು ಮೀಸಲಿರಿಸಲಾಗುತ್ತದೆ ಎಂದು ಕುಂಭ ಮೇಳದ ಅಧಿಕಾರಿಗಳು ತಿಳಿಸಿದ್ದಾರೆ.  ಮಾ.11 ರಂದು ಶಿವರಾತ್ರಿ ಅಂಗವಾಗಿ ಮೊದಲ ಶಾಹಿ ಸ್ನಾನ ನಡೆದಿತ್ತು. ಇಂದು ಎರಡನೇ ಶಾಹಿ ಸ್ನಾನ ಏ.14 ರಂದು ಮೂರನೇ ಶಾಹಿ ಸ್ನಾನದಲ್ಲಿ 13 ಅಖಾಡಗಳ ಸಂತರು ಪವಿತ್ರ ಸ್ನಾನ ಮಾಡಲಿದ್ದಾರೆ. ಉತ್ತರಾಖಂಡ್ ನಲ್ಲಿ ಭಾನುವಾರದಂದು 1,333 ಹೊಸ ಕೋವಿಡ್-19 ಪ್ರಕರಣಗಳು ವರದಿಯಾಗಿದೆ.

SCROLL FOR NEXT