ದೇಶ

ಆಸ್ಪತ್ರೆಯಲ್ಲಿ ಚಿಕಿತ್ಸೆ ಸಿಗದೆ ಕೋವಿಡ್ ರೋಗಿ ಸಾವು: ಸಚಿವರನ್ನು ತರಾಟೆಗೆ ತೆಗೆದುಕೊಂಡ ಮೃತನ ಸಂಬಂಧಿಕರು; ವಿಡಿಯೋ

Nagaraja AB

ರಾಂಚಿ: ಕೋವಿಡ್-19 ಪ್ರಕರಣಗಳು ದಿಢೀರ್ ಏರಿಕೆಯಾದ ನಂತರ ಜಾರ್ಖಂಡ್ ನಲ್ಲಿನ ಆರೋಗ್ಯ ಸೇವೆಗಳ ವಾಸ್ತವ ಪರಿಸ್ಥಿತಿ ಮಂಗಳವಾರ ತಿಳಿದುಬಂದಿತು. ಉತ್ತಮ ಚಿಕಿತ್ಸೆಗಾಗಿ ಹಜಾರಿಬಾಗ್ ನಿಂದ ರಾಂಚಿಗೆ ಕರೆತಂದಿದ್ದ ರೋಗಿಯೊಬ್ಬರು ಸದರ್ ಆಸ್ಪತ್ರೆ ಹೊರಗಡೆ ವೈದ್ಯರಿಗಾಗಿ ಕಾಯುತ್ತಿರುವಾಗಲೇ ಸಾವನ್ನಪ್ಪಿದ್ದಾರೆ. 

ಈ ಮಧ್ಯೆ ಆರೋಗ್ಯ ಸಚಿವ ಬನ್ನಾ ಗುಪ್ತಾ ಆದೇ ಆಸ್ಪತ್ರೆ ಒಳಗಡೆ ಕೋವಿಡ್-19 ರೋಗಿಗಳಿಗೆ ಪೂರೈಸಲಾಗುತ್ತಿರುವ ಸೌಲಭ್ಯಗಳ ಪರಿಶೀಲನೆ ನಡೆಸುವಲ್ಲಿ ಬ್ಯುಸಿಯಾಗಿದ್ದರು. ವೈದ್ಯರ ಸಹಾಯಕ್ಕಾಗಿ ಹಲವು ಗಂಟೆಗಳ ಕಾದರೂ ಯಾರೂ ಕೂಡಾ ಸುಳಿಯಲಿಲ್ಲ, ಆದ್ದರಿಂದ ರೋಗಿ ಸಾವನ್ನಪ್ಪಿದ್ದರು ಎಂದು ಮೃತನ ಕುಟುಂಬ ಸದಸ್ಯರು ಆರೋಪಿಸಿದರು.

ಅವರು ಬೆಳಗ್ಗೆಯೇ ಆಸ್ಪತ್ರೆಗೆ ತೆರಳಿದ್ದಾರೆ. ಆದರೆ, ಯಾವುದೇ ಖಾಸಗಿ ಆಸ್ಪತ್ರೆಗಳಲ್ಲಿ ಹಾಸಿಗೆ ದೊರೆತಿಲ್ಲ. ಅಂತಿಮವಾಗಿ ಸದರ್ ಆಸ್ಪತ್ರೆಗೆ ತೆರಳಿ, ಸುಡುವ ಬಿಸಿಲಿನಲ್ಲಿ ಆಸ್ಪತ್ರೆ ಹೊರಗಡೆ ಹಲವು ಗಂಟೆಗಳ ಕಾಯ್ದಿದ್ದಾರೆ. ಇದೇ ಅವರ ಸಾವಿಗೆ ಕಾರಣವಾಗಿದೆ. ಅವರನ್ನು ಆಸ್ಪತ್ರೆ ಒಳಗಡೆ ಕರೆದುಕೊಂಡು ಹೋದಾಗ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ. 

ಆಸ್ಪತ್ರೆಯಿಂದ ಹೊರಗಡೆ ಮೃತದೇಹವನ್ನು ತರುವಾಗ ಆಸ್ಪತ್ರೆಯಿಂದ ಹೊರಗೆ ಬಂದ ಸಚಿವರನ್ನು ನೋಡಿದ ಮೃತನ ಕುಟುಂಬ ಸದಸ್ಯರು, ತಾಳ್ಮೆ ಕಳೆದುಕೊಂಡರು. ರಾಜ್ಯದಲ್ಲಿನ ಆರೋಗ್ಯ ಸೇವೆ ವೈಫಲ್ಯ ಕುರಿತು ಕಿಡಿಕಾರಿದರು. 

'ನನ್ನ ತಂದೆಯನ್ನು ಆಸ್ಪತ್ರೆಗೆ ದಾಖಲಿಸಲು ಆಸ್ಪತ್ರೆ ಹೊರಗೆಡೆ ಹಲವು ಗಂಟೆ ಕಾದರೂ ಯಾವುದೇ ವೈದ್ಯರು ಸಹಕರಿಸಲಿಲ್ಲ. ಅಂತಿಮವಾಗಿ ಚಿಕಿತ್ಸೆ ಲಭ್ಯವಿಲ್ಲದೆ  ಅವರು ಸಾವನ್ನಪ್ಪಿದ್ದರು ಎಂದು ಮೃತನ ಮಗಳು ಮಂತ್ರಿಗಳ ಮುಂದೆ ಕೂಗಾಡಿದರು. ಕೇವಲ ಮತಗಳಿಗಾಗಿ ಜನರ ಹತ್ತಿರ ಬರುವ ಮಂತ್ರಿಗಳು, ಜನರ ಸಂಕಷ್ಟಗಳ ಬಗ್ಗೆ ಕಾಳಜಿ ವಹಿಸುವುದಿಲ್ಲ. ಪರಿಸ್ಥಿತಿ ತುಂಬಾ ಹದಗೆಟ್ಟಿದೆ. ಚಿಕಿತ್ಸೆ ಸಿಗದೆ ಜನರು ಸಾವನ್ನಪ್ಪುತ್ತಿದ್ದಾರೆ ಎಂದು ಅವರು ಆರೋಪಿಸಿದರು.

SCROLL FOR NEXT