ದೇಶ

ಕೋವಿಡ್ ಸಾಂಕ್ರಾಮಿಕ ವಿಚಾರದಲ್ಲಿ ಭಾರತದ ಬಾಗಿಲು ಇತರ ದೇಶಗಳಿಗೆ ತೆರೆದೇ ಇದೆ: ಎಸ್‍ ಜೈಶಂಕರ್ ಸ್ಪಷ್ಟನೆ

Srinivasamurthy VN

ನವದೆಹಲಿ: ಕೋವಿಡ್ ಸಾಂಕ್ರಾಮಿಕ ವಿಚಾರದಲ್ಲಿ ಭಾರತದ ಬಾಗಿಲು ಇತರ ದೇಶಗಳಿಗೆ ತೆರೆದೇ ಇದೆ. ಸಾಂಕ್ರಾಮಿಕ ರೋಗವನ್ನು ಎದುರಿಸಲು ಎಲ್ಲ ದೇಶಗಳು ಸಮನಾಗಿ ಲಸಿಕೆಗಳನ್ನು ಪಡೆಯಲು ಜಾಗತಿಕ ನ್ಯಾಯಸಮ್ಮತ ಒಕ್ಕೂಟವನ್ನು ನಿರ್ಮಿಸಬೇಕು ಎಂದು ಕೇಂದ್ರ ವಿದೇಶಾಂಗ ಸಚಿವ ಎಸ್ ಜೈ  ಶಂಕರ್ ಹೇಳಿದ್ದಾರೆ.

ರಾಜಧಾನಿಯಲ್ಲಿ ಮಂಗಳವಾರ ವರ್ಚುವಲ್ ವೇದಿಕೆ ಮೂಲಕ ಆರಂಭವಾದ ಭೌಗೋಳಿಕ ರಾಜಕೀಯ ಮತ್ತು ಭೂ-ಭೌತಶಾಸ್ತ್ರದ ಕುರಿತ ಸರ್ಕಾರದ ಪ್ರಮುಖ ಸಮ್ಮೇಳನವಾದ ರೈಸಿನಾ ಸಂವಾದದಲ್ಲಿ ಮಾತನಾಡಿದ ವಿದೇಶಾಂಗ ಸಚಿವ ಎಸ್ ಜೈಶಂಕರ್, ಇತರ ದೇಶಗಳಿಗೆ ಬಾಗಿಲು ಮುಚ್ಚುವುದಿಲ್ಲ ಎಂದಿರುವ  ಭಾರತ, ಕೊರೋನಾವೈರಸ್ ಸಾಂಕ್ರಾಮಿಕ ರೋಗವನ್ನು ಎದುರಿಸಲು ಎಲ್ಲ ದೇಶಗಳು ಸಮನಾಗಿ ಲಸಿಕೆಗಳನ್ನು ಪಡೆಯಲು ಜಾಗತಿಕ ನ್ಯಾಯಸಮ್ಮತ ಒಕ್ಕೂಟವನ್ನು ನಿರ್ಮಿಸಲು ಕರೆ ನೀಡಿದರು.

'ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುವುದು ಪ್ರಮುಖವಾಗಿದೆ. ಇಂದು ರಾಜತಾಂತ್ರಿಕತೆಯಲ್ಲಿ, ಒಳ್ಳೆಯದನ್ನು ಮಾಡುವುದು ಪ್ರಮುಖವೆನಿಸಿದೆ. ಭಾರತದ ಲಸಿಕೆ ಮೈತ್ರಿ ನೀತಿಯು ವಸುಧೈವ ಕುಟುಂಬಕಂನ ದೊಡ್ಡ ದೃಷ್ಟಿಕೋನವನ್ನು ಪ್ರತಿಬಿಂಬಿಸುತ್ತದೆ. ಭಾರತ, ಜನವರಿಯಿಂದ 80ಕ್ಕೂ ಹೆಚ್ಚು ದೇಶಗಳಿಗೆ  ಕೋವಿಡ್‍-19 ಲಸಿಕೆಗಳನ್ನು ಪೂರೈಸಿದೆ. ಕೋವಿಡ್ -19 ಲಸಿಕೆಗಳನ್ನು ತಯಾರಿಸುವ ಭಾರತದ ಸಾಮರ್ಥ್ಯ ಜಾಗತಿಕ ಸಹಕಾರದ ಉದಾಹರಣೆಯಾಗಿದೆ. ಇದನ್ನು "ಏಕಮುಖ ರಸ್ತೆ" ಎಂದು ನೋಡಲಾಗುವುದಿಲ್ಲ ಎಂದು ಹೇಳಿದ್ದಾರೆ.

‘ಅಂತಾರಾಷ್ಟ್ರೀಯ ಸಹಕಾರದಿಂದ ಲಸಿಕೆಗಳನ್ನು ತಯಾರಿಸುವ ನಮ್ಮ ಸಾಮರ್ಥ್ಯ ವೃದ್ಧಿಯಾಗಿದೆ ಎಂಬುದನ್ನು ಜನರು ಅರ್ಥ ಮಾಡಿಕೊಳ್ಳಬೇಕು. ‘ಪ್ರಬುದ್ಧ ಶಕ್ತಿ’ಯಾಗಿ ಹೊರಹೊಮ್ಮಬೇಕು. ಇತರ ದೇಶಗಳಿಗೆ ಭಾರತ ಬಾಗಿಲು ಮುಚ್ಚುವುದಿಲ್ಲ ಎಂದು ಜೈಶಂಕರ್ ಪ್ರತಿಪಾದಿಸಿದ್ದಾರೆ.

ಭಾರತ ಮತ್ತು ದಕ್ಷಿಣ ಆಫ್ರಿಕಾ, ವಿಶ್ವ ವಾಣಿಜ್ಯ ಸಂಸ್ಥೆಯಲ್ಲಿ ಕೋವಿಡ್‍-19 ಲಸಿಕೆಗಳಿಗೆ ಸಂಬಂಧಿಸಿದ ಬೌದ್ಧಿಕ ಆಸ್ತಿ (ಹಕ್ಕುಸ್ವಾಮ್ಯ) ನಿಯಮಗಳನ್ನು ತಾತ್ಕಾಲಿಕವಾಗಿ ಮನ್ನಾ ಮಾಡಲು ಪ್ರಸ್ತಾಪಿಸಿವೆ. ಇದರಿಂದಾಗಿ ಬಡ ದೇಶಗಳಲ್ಲಿನ ಔಷಧಿ ತಯಾರಕರು ಪರಿಣಾಮಕಾರಿ ಲಸಿಕೆಗಳ ಉತ್ಪಾದನೆಯನ್ನು  ಶೀಘ್ರದಲ್ಲಿಯೇ ಪ್ರಾರಂಭಿಸಬಹುದಾಗಿದೆ ಎಂದು ಅವರು ಹೇಳಿದ್ದಾರೆ.
 

SCROLL FOR NEXT