ದೇಶ

ಕೂಚ್ ಬೆಹಾರ್ ಘರ್ಷಣೆ ಪ್ರಕರಣವನ್ನು ಸರ್ಕಾರ ತನಿಖೆ ನಡೆಸಲಿದ್ದು, ತಪ್ಪಿತಸ್ಥರಿಗೆ ಶಿಕ್ಷೆಯಾಗಲಿದೆ: ಮಮತಾ ಬ್ಯಾನರ್ಜಿ

Manjula VN

ಮಾತಾಭಂಗ: ಕೂಚ್ ಬೆಹಾರ್‌ನ ಸೀತಾಲಕುಚಿಯಲ್ಲಿ ನಡೆದ ಘರ್ಷಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಸರ್ಕಾರ ತನಿಖೆ ನಡೆಸಲಿದ್ದು, ತಪ್ಪಿತಸ್ಥರಿಗೆ ಶಿಕ್ಷೆ ನೀಡಲಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಬುಧವಾರ ಹೇಳಿದ್ದಾರೆ.

ಪಶ್ಚಿಮ ಬಂಗಾಳ ವಿಧಾನಸಭೆಗೆ ಶನಿವಾರ ನಡೆದ ನಾಲ್ಕನೇ ಹಂತದ ಮತದಾನವು ಭಾರಿ ಹಿಂಸಾಚಾರಕ್ಕೆ ಸಾಕ್ಷಿಯಾಗಿತ್ತು. ಕೂಚ್‌ ಬಿಹಾರ್ ಜಿಲ್ಲೆಯ ಸೀತಾಲಕುಚಿ ಕ್ಷೇತ್ರದ 126ನೇ ಸಂಖ್ಯೆಯ ಮತಗಟ್ಟೆಯಲ್ಲಿ ಘರ್ಷಣೆ ಸಂಭವಿಸಿದ್ದ ವೇಳೆ ಸಿಐಎಸ್‌ಎಫ್‌ (ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ) ಸಿಬ್ಬಂದಿ ನಡೆಸಿದ ಗುಂಡಿನ ದಾಳಿಯಲ್ಲಿ ನಾಲ್ವರು ಮೃತಪಟ್ಟಿದ್ದರು. ಘಟನೆಯು ರಾಜಕೀಯ ಕೋಲಾಹಲಕ್ಕೆ ಕಾರಣವಾಗಿತ್ತು.

ಘಟನೆಯಲ್ಲಿ ಮೃತಪಟ್ಟವರ ನಿವಾಸಕ್ಕೆ ಇಂದು ಮಮತಾ ಬ್ಯಾನರ್ಜಿಯವರು ಭೇಟಿ ನೀಡಿದ್ದು, ಸಾಂತ್ವನ ಹೇಳಿದ್ದಾರೆ. ಅಲ್ಲದೆ, ಪ್ರಕರಣ ಸಂಬಂಧ ನಮ್ಮ ಸರ್ಕಾರ ತನಿಖೆ ನಡೆಸಲಿದ್ದು, ತಪ್ಪಿತಸ್ಥರಿಗೆ ಶಿಕ್ಷೆ ನೀಡುವ ಭರವಸೆ ನೀಡಿದ್ದಾರೆ.

ಘಟನೆಯಲ್ಲಿ ಇದೇ ಮೊದಲ ಬಾರಿ ಮತ ಹಾಕರು ಬಂದಿದ್ದ 18 ವರ್ಷದ ಆನಂದ ಬುರ್ಮಾನ್ ಎಂಬ ಯುವಕ ಕೂಡ ಮೃತಪಟ್ಟಿದ್ದು, ಯುವಕನ ಕುಟುಂಬಕ್ಕೆ ನ್ಯಾಯ ದೊರಕಿಸುವ ಭರವಸೆ ನೀಡಿದ್ದಾರೆ.

ಘರ್ಷಣೆ ಪ್ರಕರಣ ಸಂಬಂಧ ಈ ಹಿಂದೆ ಆದೇಶ ಹೊರಡಿಸಿದ್ದ ಚುನಾವಣಾ ಆಯೋಗ, ಸಿತಾಲ್​ಗುಚಿಗೆ ಮುಂದಿನ 72 ಗಂಟೆಗಳ ಅವಧಿಯಲ್ಲಿ ಹೊರಗಿನ ಯಾವುದೇ ರಾಜಕಾರಿಣಿಗಳು ಪ್ರವೇಶಿಸಬಾರದು ಎಂದು ಸೂಚಿಸಿತ್ತು.

ಆದರೆ, ಈ ಆದೇಶವನ್ನು ಮಮತಾ ಬ್ಯಾನರ್ಜಿಯವರು ತೀವ್ರವಾಗಿ ಖಂಡಿಸಿದ್ದರು. ನೊಂದ ಕುಟುಂಬಗಳನ್ನು ನಾನು ಭೇಟಿಯಾಗಬಾರದು ಎಂಬ ಒಂದೇ ಉದ್ದೇಶದಿಂದ ಆಯೋಗವು ಇಂಥ ಆದೇಶ ಹೊರಡಿಸಿದೆ ಎಂದು ದೂರಿದರು.

ನೊಂದ ಕುಟುಂಬಗಳನ್ನು ನಾನು ಭೇಟಿಯಾಗಬಾರದು ಎಂಬ ಕಾರಣಕ್ಕೆ ಚುನಾವಣಾ ಆಯೋಗವು ಇಂಥ ಆದೇಶ ಹೊರಡಿಸಿರುವುದು ದುರದೃಷ್ಟಕರ. ಆಯೋಗ ವಿಧಿಸಿರುವ 72 ಗಂಟೆಗಳ ನಿರ್ಬಂಧ ಮುಗಿದ ತಕ್ಷಣ ನಾನು ಆ ಕುಟುಂಬಗಳನ್ನು ಭೇಟಿಯಾಗುತ್ತೇನೆ. ನನ್ನ ಚುನಾವಣಾ ವೆಚ್ಚದ ನಿಧಿಯಿಂದಲೇ ಆ ಕುಟುಂಬಗಳಿಗೆ ಸಾಧ್ಯವಾದಮಟ್ಟಿಗೂ ಹಣಸಹಾಯ ಮಾಡುತ್ತೇನೆ ಎಂದಿದ್ದರು.

SCROLL FOR NEXT