ದೇಶ

ಪಶ್ಚಿಮ ಬಂಗಾಳ: ಸಂಜೆ 7 ರಿಂದ ಬೆಳಗ್ಗೆ  10 ಗಂಟೆಯವರೆಗೆ ಚುನಾವಣಾ ರ‍್ಯಾಲಿ, ಸಾರ್ವಜನಿಕ ಸಭೆಗಳಿಗೆ ನಿರ್ಬಂಧ

Nagaraja AB

ನವದೆಹಲಿ: ಕೋವಿಡ್-19 ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಶುಕ್ರವಾರ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಸಮಯ ಕಡಿತ ಸೇರಿದಂತೆ ರಾಜಕೀಯ ಪಕ್ಷಗಳ ಪ್ರಚಾರಕ್ಕೆ ನಿರ್ಬಂಧಗಳನ್ನು ಜಾರಿಗೊಳಿಸಿದೆ.

ಚುನಾವಣಾ ಆಯೋಗದ ಆದೇಶದಂತೆ ಸಂಜೆ 7 ಗಂಟೆಯವರೆಗೂ ಮಾತ್ರ ಪ್ರಚಾರಕ್ಕೆ ಅವಕಾಶ ನೀಡಲಾಗಿದೆ. ಈ ಹಿಂದೆ ರಾತ್ರಿ 10 ಗಂಟೆಯವರೆಗೂ ಪ್ರಚಾರ ನಡೆಸಲು ಅವಕಾಶ ನೀಡಲಾಗಿತ್ತು. ಸಂಜೆ 7 ಗಂಟೆಯಿಂದ ಬೆಳಗ್ಗೆ 10 ಗಂಟೆಯವರೆಗೂ ರಾಜ್ಯದಲ್ಲಿ ಯಾವುದೇ ರೀತಿಯ ಪ್ರಚಾರ ನಡೆಸದಂತೆ ಚುನಾವಣಾ ಆಯೋಗ ತಿಳಿಸಿದೆ.

ಎಂಟು ಹಂತಗಳ ಚುನಾವಣೆ ಪೈಕಿ ಉಳಿದಿರುವ ಮೂರು ಹಂತಗಳ ಚುನಾವಣೆಗಾಗಿ ಏಪ್ರಿಲ್ 22,26 ಮತ್ತು 29 ರಂದು ಚುನಾವಣೆ ನಡೆಯಲಿದ್ದು, ಮೌನ ಅವಧಿಯನ್ನು 48 ಗಂಟೆಯಿಂದ 72 ಗಂಟೆಗೆ ವಿಸ್ತರಿಸಲಾಗಿದೆ. ಸಾಮಾನ್ಯವಾಗಿ 48 ಗಂಟೆ ಇರುತ್ತಿದ್ದ ಈ ಅವಧಿಯಲ್ಲಿ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು, ಚುನಾವಣಾ ರ‍್ಯಾಲಿ, ಸಭೆಗಳನ್ನು ನಡೆಸುವಂತಿರಲಿಲ್ಲ.

SCROLL FOR NEXT