ದೇಶ

ಕೇರಳ: ತ್ರಿಶೂರ್ ಪೂರಂ ಉತ್ಸವ ವೇಳೆ ಮರದ ಕೊಂಬೆ ಮುರಿದು ಬಿದ್ದು ಇಬ್ಬರು ಸಾವು, 25ಕ್ಕೂ ಹೆಚ್ಚು ಮಂದಿಗೆ ಗಾಯ

Sumana Upadhyaya

ತ್ರಿಶೂರ್: ತ್ರಿಶೂರ್ ಪೂರಂನ ಅಂಗವಾಗಿ ನಡೆದ ಮದತಿಲ್ ವರವು ಮೆರವಣಿಗೆಯಲ್ಲಿ ಭಕ್ತರು ಮತ್ತು ತಾಳವಾದ್ಯ ಕಲಾವಿದರು ಸಾಗುತ್ತಿದ್ದಾಗ ದೊಡ್ಡ ಆಲದ ಮರವೊಂದರ ಕೊಂಬೆ ಮುರಿದು ಬಿದ್ದ ಪರಿಣಾಮ ಇಬ್ಬರು ಮೃತಪಟ್ಟು 25 ಮಂದಿ ಗಾಯಗೊಂಡಿರುವ ಘಟನೆ ಕಳೆದ ಮಧ್ಯರಾತ್ರಿ ಸಂಭವಿಸಿದೆ.

ತಿರುವಂಬಡಿ ದೇವಸ್ಥಾನ ಪೂರಂನ ಸಂಘಟನಾ ಸಮಿತಿ ಸದಸ್ಯರಾದ ರಮೇಶ್ ಮತ್ತು ಪಣಿಯತ್ ರಾಧಾಕೃಷ್ಣನ್ ಮೃತಪಟ್ಟ ದುರ್ದೈವಿಗಳಾಗಿದ್ದಾರೆ. ಮರದ ಕೊಂಬೆ ಅವರ ತಲೆಯ ಮೇಲೆ ಬಿದ್ದು ಇನ್ನುಳಿದ 7 ಮಂದಿ ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ತ್ರಿಶೂರು ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಮತ್ತು ಉಳಿದ 28 ಮಂದಿಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ದುರ್ಘಟನೆ ಹಿನ್ನೆಲೆಯಲ್ಲಿ ಇಂದು ನಡೆಯಬೇಕಿದ್ದ ಭವ್ಯ ಪಟಾಕಿ ಸಿಡಿಸುವ ಪ್ರದರ್ಶನವನ್ನು ರದ್ದುಪಡಿಸಲಾಗಿದೆ. ಪ್ರದರ್ಶನಕ್ಕೆ ಇಟ್ಟಿದ್ದ ಪಟಾಕಿಗಳನ್ನು ಇಂದು ನಸುಕಿನ ಜಾವ ನಾಶಪಡಿಸಲಾಯಿತು. ಇಂದು ಸಾಂಪ್ರದಾಯಿಕವಾಗಿ ಮಾತ್ರ ತಲಾ ಒಂದು ಆನೆಯ ಪಕಲಪೂರಮ್ ಮೆರವಣಿಗೆ ನಡೆಸಲಾಗುತ್ತದೆ ಎಂದು ದೇವಸ್ಥಾನ ಮಂಡಳಿ ತಿಳಿಸಿದೆ.

ದುರ್ಘಟನೆ ನಡೆದ ಸ್ಥಳದಿಂದ ಪೊಲೀಸರು, ಭಕ್ತರು ಮತ್ತು ಅಗ್ನಿಶಾಮಕ ಸಿಬ್ಬಂದಿ ನೆರವಿನಿಂದ 40ಕ್ಕೂ ಹೆಚ್ಚು ಮಂದಿಯನ್ನು ಕಾಪಾಡಲಾಗಿದೆ. ಮರದ ಕೊಂಬೆ ವಿದ್ಯುತ್ ತಂತಿ ಮೇಲೆ ಬಿದ್ದ ಕಾರಣ ರಕ್ಷಣಾ ಕಾರ್ಯ ವಿಳಂಬವಾಗಿತ್ತು. 

SCROLL FOR NEXT