ದೇಶ

ಕೋವಿಡ್ ಪರಿಸ್ಥಿತಿ ನಿರ್ವಹಣೆ: ನಿವೃತ್ತ ಸೇನಾ ವೈದ್ಯಕೀಯ ಸಿಬ್ಬಂದಿಗಳ ಬಳಕೆಗೆ ಕೇಂದ್ರ ಮುಂದು

Srinivas Rao BV

ನವದೆಹಲಿ: ಕೇಂದ್ರ ಸರ್ಕಾರ ಕೋವಿಡ್-19 ಪರಿಸ್ಥಿತಿ ನಿರ್ವಹಣೆಗಾಗಿ ಸೇನಾ ಪಡೆಯ ನಿವೃತ್ತ ವೈದ್ಯಕೀಯ ಸಿಬ್ಬಂದಿಗಳ ಸಹಾಯ ತೆಗೆದುಕೊಳ್ಳಲು ಮುಂದಾಗಿದೆ. 

ನಿವೃತ್ತರಾಗಿರುವ ಹಾಗೂ ಕಳೆದ 2 ವರ್ಷಗಳಲ್ಲಿ ಅವಧಿಗೂ ಮುನ್ನವೇ ನಿವೃತ್ತಿ ಪಡೆದಿರುವ ವೈದ್ಯಕೀಯ ಸಿಬ್ಬಂದಿಗಳು ತಮ್ಮ ನಿವಾಸ ಇರುವ ಪ್ರದೇಶಗಳಲ್ಲಿಯೇ ಕೋವಿಡ್ ಸೌಲಭ್ಯಗಳಲ್ಲಿ ಸೇವೆ ಸಲ್ಲಿಸಲಿದ್ದಾರೆ ಎಂದು ಕೇಂದ್ರ ಸರ್ಕಾರ ಏ.26 ರಂದು ತಿಳಿಸಿದೆ. 

ಕೋವಿಡ್-19 ನ ಎರಡನೇ ಅಲೆಯನ್ನು ನಿರ್ವಹಣೆ ಮಾಡುವುದಕ್ಕೆ ಸೇನಾ ಪಡೆಗಳಿಂದ ಕೈಗೊಳ್ಳಲಾದ ಕ್ರಮಗಳು ಹಾಗೂ ತಯಾರಿಗಳ ಬಗ್ಗೆ ಸಿಡಿಎಸ್ ಬಿಪಿನ್ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಾಹಿತಿ ನೀಡಿದ್ದು, ಈ ನಿರ್ಧಾರದ ಬಗ್ಗೆ ತಿಳಿಸಿದ್ದಾರೆ. 
    
ವೈದ್ಯಕೀಯ ತುರ್ತು ಹೆಲ್ಪ್ ಲೈನ್ ಮೂಲಕ ಸಮಾಲೋಚನೆ ನಡೆಸಿ ಚಿಕಿತ್ಸೆ ನೀಡುವಂತೆ ನಿವೃತ್ತ ಸೇನಾ ವೈದ್ಯಕೀಯ ಸಿಬ್ಬಂದಿಗಳಿಗೆ ಮನವಿ ಮಾಡಲಾಗಿದೆ, ಕಳೆದ 2 ವರ್ಷಗಳಲ್ಲಿ ಅವಧಿಗೂ ಮುನ್ನವೇ ನಿವೃತ್ತಿ ಪಡೆದಿರುವ ವೈದ್ಯಕೀಯ ಸಿಬ್ಬಂದಿಗಳಿಗೂ ಮನವಿ ಮಾಡಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. 

ಇದೇ ವೇಳೆ ಸೇನೆಯ ಬಳಿ ಇರುವ ಆಕ್ಸಿಜನ್ ಸಿಲಿಂಡರ್ ಗಳನ್ನು ಆಸ್ಪತ್ರೆಗಳಿಗೆ ತಲುಪಿಸಲಾಗುವುದು ಎಂದೂ ರಾವತ್ ಪ್ರಧಾನಿ ಮೋದಿ ಅವರಿಗೆ ಮಾಹಿತಿ ನೀಡಿದ್ದಾರೆ. ಇನ್ನು ಎಲ್ಲಾ ವೈದ್ಯಕೀಯ ಅಧಿಕಾರಿಗಳನ್ನು ನರ್ಸ್ ಗಳನ್ನು ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸುವುದಕ್ಕೆ ನಿಯೋಜನೆ ಮಾಡಲಾಗುವುದು ಎಂದು ಹೇಳಿದ್ದಾರೆ. 

ಕೋವಿಡ್-19 ವಿರುದ್ಧದ ಹೋರಾಟಕ್ಕೆ ಬೃಹತ್ ಪ್ರಮಾಣದಲ್ಲಿ ವೈದ್ಯಕೀಯ ಸೌಕರ್ಯಗಳನ್ನು ಸೃಷ್ಟಿಸಲಾಗುತ್ತಿದೆ ಹಾಗೂ ಸೇನಾ ವೈದ್ಯಕೀಯ ಮೂಲಸೌಕರ್ಯಗಳನ್ನು ಸಾರ್ವಜನಿಕರಿಗೆ ಒದಗಿಸಲಾಗುತ್ತದೆ ಎಂದು ರಾವತ್ ಮಾಹಿತಿ ನೀಡಿದ್ದಾರೆ. 

SCROLL FOR NEXT