ದೇಶ

ಬಿಎಸ್ ಎಫ್ ಕ್ಯಾಂಪ್ ಗಳ ಮೇಲೆ ಮಾವೋವಾದಿಗಳಿಂದ ರಾಕೆಟ್ ದಾಳಿ; ಅದೃಷ್ಟವಶಾತ್ ಯೋಧರು ಪಾರು!

Srinivasamurthy VN

ರಾಯ್ಪುರ: ನಕ್ಸಲ್ ಪೀಡಿತ ಛತ್ತೀಸ್ ಘಡದಲ್ಲಿ ಮತ್ತೆ ಮಾವೋವಾದಿಗಳ ಅಬ್ಬರ ಜೊರಾಗಿದ್ದು, ಗಡಿ ಭದ್ರತಾ ಪಡೆಯ ಕ್ಯಾಂಪ್ ಗಳನ್ನು ಗುರಿಯಾಗಿರಿಸಿಕೊಂಡು ರಾಕೆಟ್ ದಾಳಿ ನಡೆಸಿದ್ದಾರೆ.

ಛತ್ತೀಸ್ ಗಢದ ಕಂಕರ್ ಜಿಲ್ಲೆಯ ಕಾಂತೇಡಾದಲ್ಲಿರುವ ಬಿಎಸ್ಎಫ್ ಕ್ಯಾಂಪ್ ನ ಆವರಣದಲ್ಲಿ ರಾಕೆಟ್ ಗಳು ಪತ್ತೆಯಾಗಿದ್ದು, ಈ ರಾಕೆಟ್ ಗಳನ್ನು ಮಾವೋವಾದಿಗಳೇ ಹಾರಿಸಿದ್ದಾರೆ ಎಂದು ಸೇನಾಧಿಕಾರಿಗಳು ಮಾಹಿತಿ ನೀಡಿದ್ದಾರೆ. ಒಟ್ಟು 8 ರಾಕೆಟ್ ಗಳನ್ನು ಮಾವೋವಾದಿಗಳು ಬಿಎಸ್ ಎಫ್ ಕ್ಯಾಂಪ್ ನತ್ತ  ಹಾರಿಸಿದ್ದು, ಈ ಪೈಕಿ 3 ರಾಕೆಟ್ ಗಳು ಬಿಎಸ್ಎಫ್ ಕ್ಯಾಂಪ್ ನ ಸಮೀಪದಲ್ಲೇ ಬಿದ್ದಿವೆ. ರಾಕೆಟ್ ಹಾರಿಸಲು ಮಾವೋವಾದಿಗಳು ಸುಧಾರಿತ ಅಂಡರ್-ಬ್ಯಾರೆಲ್ ಗ್ರೆನೇಡ್ ಲಾಂಚರ್ (ಯುಬಿಜಿಎಲ್) ಗಳನ್ನು ರಾಕೆಟ್ ಗಳನ್ನು ಹಾರಿಸಿದ್ದಾರೆ. 

ಅದೃಷ್ಟವಶಾತ್ ಈ ರಾಕೆಟ್ ದಾಳಿಯಲ್ಲಿ ಯಾವುದೇ ಸೈನಿಕನಿಗೆ ಅಪಾಯ ಸಂಭವಿಸಿಲ್ಲ ಎಂದು ಕಂಕರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ ಆರ್ ಅಹಿರೆ ಹೇಳಿದ್ದಾರೆ. ಇನ್ನು ಇತ್ತ ರಾಕೆಟ್ ದಾಳಿ ನಡೆಯುತ್ತಲೇ ಎಚ್ಚೆತ್ತ ಸೈನಿಕರು ಕೂಡಲೇ ಮಾವೋವಾದಿಗಳತ್ತ ಗುಂಡಿನ ಸುರಿಮಳೆಗರೆದಿದ್ದಾರೆ. ಇತ್ತ ಯೋಧರು  ಕಾರ್ಯಾಚರಣೆ ಆರಂಭಿಸುತ್ತಲೇ ಮಾವೋವಾದಿಗಳು ಸಮೀಪದ ಅರಣ್ಯದೊಳಗೆ ನುಸುಳಿ ಪರಾರಿಯಾಗಿದ್ದಾರೆ. 

ಕಳೆದ ವರ್ಷ ನವೆಂಬರ್ ನಲ್ಲಿ ಕಂಕರ್ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿನ ಬುಡಕಟ್ಟು ಜನರು ಮಾವೋವಾದಿಗಳ ಚಟುವಟಿಕೆಗಳ ಕುರಿತು ದೂರು ನೀಡಿ ಪ್ರತಿಭಟನೆ ನಡೆಸಿದ ಬಳಿಕ ಇಲ್ಲಿ ಬಿಎಸ್ ಎಫ್ ಕ್ಯಾಂಪ್ ಗಳನ್ನು ತೆರೆಯಲಾಗಿತ್ತು. ಹೀಗಾಗಿ ಇಲ್ಲಿ ಮಾವೋವಾದಿಗಳ ಚಲನವಲನ ಕಡಿಮೆಯಾಗಿತ್ತು.

SCROLL FOR NEXT