ದೇಶ

ಉತ್ತರಾಖಂಡ: ಚಮೋಲಿಯಲ್ಲಿ ಹಿಮಪಾತ, ಮೃತರ ಸಂಖ್ಯೆ 15ಕ್ಕೆ ಏರಿಕೆ 

Nagaraja AB

ಗೊಪೇಶ್ವರ್: ಉತ್ತರಾಖಂಡ್ ರಾಜ್ಯದ ಚಮೋಲಿ ಜಿಲ್ಲೆಯಲ್ಲಿನ ಭಾರತ- ಚೀನಾ ಗಡಿ ಬಳಿಯ ಸುಮ್ನಾ ಬಳಿ ಸಂಭವಿಸಿದ ಹಿಮಪಾತದಲ್ಲಿ ಮೃತಪಟ್ಟವರ ಸಂಖ್ಯೆ 15ಕ್ಕೆ ಏರಿಕೆಯಾಗಿದೆ. ಸೋಮವಾರ ಮೂವರು ಮೃತದೇಹಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಮೂವರು ನಾಪತ್ತೆಯಾಗಿದ್ದು, ಅವರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದು ಚಮೋಲಿ ವಿಪತ್ತು ನಿರ್ವಹಣಾಧಿಕಾರಿ ಎನ್. ಕೆ. ಜೋಶಿ ತಿಳಿಸಿದ್ದಾರೆ. ಧೌಲಿ ಗಂಗಾ ನದಿಯಿಂದ ಹುಟ್ಟುವ ಎರಡು ತೊರೆಗಳಾದ ಗಿರ್ತಿಗಡ್ ಮತ್ತು ಕಿಯೋಗಾದ್ ಸಂಗಮದ ಬಳಿ ಇರುವ ಸುಮ್ನಾ ಗ್ರಾಮದಲ್ಲಿ ಶುಕ್ರವಾರ ಹಿಮಪಾತ ಸಂಭವಿಸಿತ್ತು.  ಕೆಳೆದ ಫೆಬ್ರವರಿಯಲ್ಲಿ ಇಲ್ಲಿಯೇ ಸಂಭವಿಸಿದ್ದ ಹಿಮಪಾತದಿಂದ 80 ಮಂದಿ ಸಾವನ್ನಪ್ಪಿದ್ದು, 126 ಜನರು ನಾಪತ್ತೆಯಾಗಿದ್ದರು.

ಶನಿವಾರ ಹಿಮಪಾತ ಸಂಭವಿಸಿದ್ದ ಸ್ಥಳದಿಂದ ಹತ್ತು, ಭಾನುವಾರ ಎರಡು ಮೃತದೇಹಗಳನ್ನು ವಶಕ್ಕೆ ಪಡೆಯಲಾಗಿತ್ತು. ಇಂದು ಮೂರು ಮೃತದೇಹ ಸೇರಿದಂತೆ ಒಟ್ಟಾರೇ ಈವರೆಗೆ 15 ಮೃತದೇಹಗಳನ್ನು ವಶಕ್ಕೆ ಪಡೆಯಲಾಗಿದ್ದು, ಮರಣೋತ್ತರ ಪರೀಕ್ಷೆಗಾಗಿ ಅವುಗಳನ್ನು ಜೋಶಿಮಠಕ್ಕೆ ರವಾನಿಸಲಾಗಿದೆ ಎಂದು ಜೋಶಿ ತಿಳಿಸಿದ್ದಾರೆ.

ಮೃತರ ಪೈಕಿ 11 ಮಂದಿ ಜಾರ್ಖಂಡ್ ನಿವಾಸಿಗಳೆದು ಗುರುತಿಸಲಾಗಿದೆ. ಘಟನೆಯಲ್ಲಿ ಗಾಯಗೊಂಡಿರುವ ಏಳು ಮಂದಿಗೆ ಚಿಕಿತ್ಸೆ ಮುಂದುವರೆಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

SCROLL FOR NEXT