ದೇಶ

ಪಶ್ವಿಮ ಬಂಗಾಳ ವಿಧಾನಸಭಾ ಚುನಾವಣೆಯ ಅಂತಿಮ ಹಂತದಲ್ಲಿ ಶೇ 76ಕ್ಕೂ ಅಧಿಕ ಮತದಾನ

Lingaraj Badiger

ಕೊಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಅಂತಿಮಹಂತದಲ್ಲಿ ಗುರುವಾರ 35 ಕ್ಷೇತ್ರಗಳಿಗೆ ನಡೆದ ಮತದಾನದಲ್ಲಿ ಸಂಜೆ 6.30ರ ವೇಳೆಗೆ ಪ್ರಾಥಮಿಕ ವರದಿಗಳಂತೆ ಶೇ. 76ಕ್ಕೂ ಅಧಿಕ ಮತದಾನವಾಗಿದೆ.

ಇಂದು ಬಿರ್ಭಮ್, ಮುರ್ಷಿದಾಬಾದ್, ಮಾಲ್ಡಾ ಮತ್ತು ಕೋಲ್ಕತಾ ಉತ್ತರ ಜಿಲ್ಲೆಗಳಲ್ಲಿ ಕೊನೆಯ ಹಂತದಲ್ಲಿ ಮತದಾನ ನಡೆದಿದೆ. 

ವಿವಿಧ ಪ್ರದೇಶಗಳಲ್ಲಿ ಕೆಲ ಅಹಿತಕರ ಘಟನೆಗಳನ್ನು ಹೊರತು ಪಡಿಸಿ ಒಟ್ಟಾರೆ ಮತದಾನ ಶಾಂತಿಯುತವಾಗಿತ್ತು.

ಉತ್ತರ ಕೋಲ್ಕತ್ತಾದ ಮಹಾಜತಿ ಸದಾನ್ ಸಭಾಂಗಣದ ಬಳಿ ಕಚ್ಚಾ ಬಾಂಬ್ ಎಸೆಯಲಾಗಿದ್ದು, ಈ ಕುರಿತಂತೆ ವಿವರಗಳನ್ನು ಚುನಾವಣಾ ಆಯೋಗ ಕೇಳಿದೆ. ತಮ್ಮ ಕಾರನ್ನು ಗುರಿಯಾಗಿಸಿಕೊಂಡು ಬಾಂಬ್ ಎಸೆಯಲಾಗಿದೆ ಎಂದು ಜರಸಂಕೊ ಬಿಜೆಪಿ ಅಭ್ಯರ್ಥಿ ಮೀನಾ ದೇವಿ ಪುರೋಹಿತ್ ಆರೋಪಿಸಿದ್ದಾರೆ.

ಆದರೆ, ಕೇಂದ್ರ ಕೋಲ್ಕತ್ತಾದ ಮಹಾಜತಿ ಸದಾನ್ ಹೊರಗೆ ಪಟಾಕಿ ಸಿಡಿಸಲಾಗಿದೆ. ಇದು ಬಾಂಬ್ ಅಲ್ಲ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಚುನಾವಣಾ ಆಯೋಗದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮುರ್ಷಿದಾಬಾದ್ ಜಿಲ್ಲೆಯಲ್ಲಿ ಬೆಳಗ್ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, ಇತರ ಇಬ್ಬರು ಗಾಯಗೊಂಡಿದ್ದರಿಂದ ಈ ಪ್ರದೇಶದಲ್ಲಿ ಕೆಲ ಕಾಲ ಉದ್ರಿಕ್ತ ವಾತಾವರಣ ನಿರ್ಮಾಣವಾಗಿತ್ತು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಹಿರಿಯ ನಟ ಮತ್ತು ಬಿಜೆಪಿ ಮುಖಂಡ ಮಿಥುನ್ ಚಕ್ರವರ್ತಿ ಅವರು ಉತ್ತರ ಕೊಲ್ಕತ್ತಾದ ಕಾಶಿಪುರ-ಬೆಲ್ಗಾಚಿಯಾ ಪ್ರದೇಶದ ಮತದಾನ ಕೇಂದ್ರದಲ್ಲಿ ಮತ ಚಲಾಯಿಸಿದರು. ಪಶ್ಚಿಮ ಬಂಗಾಳ ರಾಜ್ಯಪಾಲ ಜಗದೀಪ್ ಧನ್ಕರ್ ಮತ್ತು ಅವರ ಪತ್ನಿ ಸುದೇಶ್ ಧನ್ಕರ್, ಕಾಂಗ್ರೆಸ್ ಸಂಸದ ಮತ್ತು ಪಕ್ಷದ ರಾಜ್ಯಾಧ್ಯಕ್ಷ ಅಧೀರ್ ರಂಜನ್ ಚೌಧರಿ, ಮುರ್ಷಿದಾಬಾದ್ ನ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.

SCROLL FOR NEXT