ದೇಶ

ಪಶ್ಚಿಮ ಬಂಗಾಳ ಚುನಾವಣೆ: ಅಂತಿಮ ಹಂತದ ಮತದಾನ ಇಂದು, 35 ಕ್ಷೇತ್ರಗಳ 283 ಅಭ್ಯರ್ಥಿಗಳ ಭವಿಷ್ಯ ನಿರ್ಧಾರ

Sumana Upadhyaya

ಕೋಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭೆಯ ಅಂತಿಮ ಮತ್ತು 8ನೇ ಹಂತದ ಮತದಾನ ಗುರುವಾರ ಬೆಳಗ್ಗೆ 7 ಗಂಟೆಗೆ ಆರಂಭವಾಗಿದೆ. 35 ವಿಧಾನಸಭಾ ಕ್ಷೇತ್ರಗಳಿಗೆ ಇಂದು ಮತದಾನ ನಡೆಯುತ್ತಿದ್ದು ಮತದಾರರು ಬೆಳಗ್ಗೆಯೇ ಹಕ್ಕು ಚಲಾಯಿಸಲು ಮತಗಟ್ಟೆಗಳ ಮುಂದೆ ಸಾಲಿನಲ್ಲಿ ನಿಂತಿರುವುದು ಕಂಡುಬಂತು.

84 ಲಕ್ಷಕ್ಕೂ ಅಧಿಕ ಮತದಾರರು ಇಂದು 283 ಅಭ್ಯರ್ಥಿಗಳ ಭವಿಷ್ಯ ಬರೆಯಲಿದ್ದಾರೆ. ಮುರ್ಶಿದಾಬಾದ್ ಮತ್ತು ಬಿರ್ಬುಮ್ ಜಿಲ್ಲೆಗಳಲ್ಲಿ ತಲಾ 11 ಕ್ಷೇತ್ರಗಳು, ಮಾಲ್ಡಾದಲ್ಲಿ 6 ಮತ್ತು ಕೋಲ್ಕತ್ತಾದ 7 ವಿಧಾನಸಭಾ ಕ್ಷೇತ್ರಗಳಿಗೆ ಇಂದು ಮತದಾನ ನಡೆಯುತ್ತಿದೆ. ಇಂದು ಬೆಳಗ್ಗೆ 7 ಗಂಟೆಯಿಂದ ಮತದಾನ ಆರಂಭವಾಗಲಿದ್ದು ಸಾಯಂಕಾಲ 6.30ರವರೆಗೆ ಮುಂದುವರಿಯಲಿದೆ.

ಒಟ್ಟು 84 ಲಕ್ಷದ 77 ಸಾವಿರದ 728 ಮತದಾರರಿದ್ದು, ಅವರಲ್ಲಿ 43 ಲಕ್ಷದ 55 ಸಾವಿರದ 835 ಪುರುಷರು, 41 ಲಕ್ಷದ 21 ಸಾವಿರಗ 735 ಮಹಿಳೆಯರು ಮತ್ತು ತೃತೀಯ ಲಿಂಗದ 158 ಮಂದಿ ಎಂಟನೇ ಹಂತದ ಚುನಾವಣೆಯಲ್ಲಿ ಮತ ಚಲಾಯಿಸಲು ಅರ್ಹರಾಗಿದ್ದಾರೆ. ಟಿಎಂಸಿ, ಬಿಎಸ್ಪಿ ಮತ್ತು ಬಿಜೆಪಿ ತಲಾ 11 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರೆ, ಸಿಪಿಐ (ಎಂ) ನಾಲ್ಕು ಸ್ಥಾನಗಳಲ್ಲಿ, ಕಾಂಗ್ರೆಸ್ ಮೂರರಲ್ಲಿ, ಎಐಎಫ್‌ಬಿ 2 ಮತ್ತು ಆರ್‌ಎಸ್‌ಪಿ (1) ಸ್ಪರ್ಧಿಸುತ್ತಿದೆ. ನಾಲ್ಕು ಸ್ವತಂತ್ರ ಅಭ್ಯರ್ಥಿಗಳೂ ಕಣದಲ್ಲಿದ್ದಾರೆ.

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ 2021ರ ಅಂತಿಮ ಹಂತದ ಮತದಾನ ಇಂದು ನಡೆಯುತ್ತಿದೆ. ಕೋವಿಡ್-19 ಶಿಷ್ಟಾಚಾರಗಳೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಮತದಾರರು ಮತಗಟ್ಟೆಗಳಿಗೆ ಬಂದು ತಮ್ಮ ಹಕ್ಕು ಚಲಾಯಿಸಿ ಪ್ರಜಾಪ್ರಭುತ್ವದ ಉತ್ಸವದಲ್ಲಿ ಭಾಗಿಯಾಗಿ ಎಂದು ಪ್ರಧಾನಿ ಮೋದಿ ಕರೆ ನೀಡಿದ್ದಾರೆ.

SCROLL FOR NEXT