ದೇಶ

ಸ್ವಾತಂತ್ರ್ಯ ನಂತರ ಅಸಮರ್ಪಕ ಪಡಿತರ ವಿತರಣಾ ವ್ಯವಸ್ಥೆಯಿಂದ ಬಡವರಿಗೆ ಸಂಪೂರ್ಣ ಲಾಭ ಆಗಿಲ್ಲ: ಪ್ರಧಾನಿ ಮೋದಿ

Lingaraj Badiger

ಅಹಮದಾಬಾದ್: ಸ್ವಾತಂತ್ರ್ಯ ನಂತರ ಅಗ್ಗದ ಪಡಿತರ ಯೋಜನೆಗಳ ವ್ಯಾಪ್ತಿ ಮತ್ತು ಬಜೆಟ್ ಹೆಚ್ಚಾಗಿದೆ. ಆದರೆ ಪರಿಣಾಮಕಾರಿ ವಿತರಣಾ ವ್ಯವಸ್ಥೆ ಇಲ್ಲದೆ ಮತ್ತು ಸ್ವಾರ್ಥಿಗಳಿಂದಾಗಿ ಬಡವರಿಗೆ ಅದರ ಸಂಪೂರ್ಣ ಲಾಭ ಸಿಕ್ಕಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಹೇಳಿದ್ದಾರೆ.

ಗುಜರಾತಿನ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ(PM-GKAY)ಫಲಾನುಭವಿಗಳೊಂದಿಗೆ ವರ್ಚುವಲ್ ಸಂವಾದದ ನಂತರ ಮಾತನಾಡಿದ ಪ್ರಧಾನಿ ಮೋದಿ, ವರ್ಷಗಳಿಂದ ವರ್ಷಕ್ಕೆ ಆಹಾರ ಸಂಗ್ರಹಣೆ ಹೆಚ್ಚುತ್ತಲೇ ಹೋಯಿತು, ಆದರೆ ಹಸಿವು ಮತ್ತು ಅಪೌಷ್ಟಿಕತೆಯ ಅನುಪಾತದಲ್ಲಿ ಮಾತ್ರ ಯಾವುದೇ ಕಡಿಮೆಯಾಗಲಿಲ್ಲ ಎಂದರು.

ಪಿಎಂ-ಜಿಕೆಎಐ ಆಹಾರ ಭದ್ರತಾ ಯೋಜನೆಯು ಕೊರೋನಾ ವೈರಸ್ ಸಾಂಕ್ರಾಮಿಕ ಸಮಯದಲ್ಲಿ ಲಕ್ಷಾಂತರ ಬಡ ಜನರಿಗೆ ಸಹಾಯ ಮಾಡುತ್ತಿದೆ ಎಂದು ಮೋದಿ ಹೇಳಿದರು.

ಈ ಯೋಜನೆಯ ಅಡಿಯಲ್ಲಿ ಲಕ್ಷಾಂತರ ಕುಟುಂಬಗಳಿಗೆ ಉಚಿತ ಪಡಿತರವನ್ನು ವಿತರಿಸಲಾಗುತ್ತಿದೆ ಮತ್ತು ಇದು ಸಾಂಕ್ರಾಮಿಕ ಸಮಯದಲ್ಲಿ ಬಡವರ ಆತಂಕವನ್ನು ಕಡಿಮೆ ಮಾಡಲು ಸಹಾಯ ಮಾಡಿದೆ. 

ಬಡವರಿಗೆ ಆಹಾರ ಧಾನ್ಯ ವಿತರಣಾ ವ್ಯವಸ್ಥೆಯನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾಡಲು ಸರ್ಕಾರ ಹೊಸ ತಂತ್ರಜ್ಞಾನವನ್ನು ಬಳಸಿದೆ ಎಂದು ಮೋದಿ ಹೇಳಿದರು.

"ಸ್ವಾತಂತ್ರ್ಯದ ನಂತರ, ಪ್ರತಿಯೊಂದು ಸರ್ಕಾರವು ಬಡವರಿಗೆ ಅಗ್ಗದ ಆಹಾರವನ್ನು ಒದಗಿಸುವ ಬಗ್ಗೆ ಮಾತನಾಡುತ್ತಿತ್ತು. ಅಗ್ಗದ ಪಡಿತರ ಯೋಜನೆಗಳ ವ್ಯಾಪ್ತಿ ಮತ್ತು ಬಜೆಟ್ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ, ಆದರೆ ಇದರ ಪರಿಣಾಮ ಮಾತ್ರ ಸೀಮಿತವಾಗಿತ್ತು. ದೇಶದ ಆಹಾರ ಸಂಗ್ರಹವು ಹೆಚ್ಚಾಯಿತು, ಆದರೆ ಹಸಿವು ಮತ್ತು ಅಪೌಷ್ಟಿಕತೆ ಪ್ರಮಾಣ ಕಡಿಮೆಯಾಗಲಿಲ್ಲ" ಎಂದು ಪ್ರಧಾನಿ ಹೇಳಿದರು.

SCROLL FOR NEXT