ದೇಶ

ಪೆಗಾಸಸ್‌ ತಯಾರಕ ಸಂಸ್ಥೆ ಜೊತೆ ಯಾವುದೇ ವಹಿವಾಟು ನಡೆಸಿಲ್ಲ: ರಕ್ಷಣಾ ಸಚಿವಾಲಯ

Srinivas Rao BV

ನವದೆಹಲಿ: ಇಸ್ರೇಲಿ ಸ್ಪೈ ವೇರ್‌ ತಯಾರಕ ಸಂಸ್ಥೆ ಎನ್‌ ಎಸ್‌ ಓ ಟೆಕ್ನಾಲಾಜೀಸ್‌ ಜೊತೆ ಯಾವುದೇ ವ್ಯವಹಾರ, ವಹಿವಾಟು ನಡೆಸಿಲ್ಲ ಎಂದು ರಕ್ಷಣಾ ಸಚಿವಾಲಯ ಸೋಮವಾರ ರಾಜ್ಯಸಭೆಗೆ ಸ್ಪಷ್ಟಪಡಿಸಿದೆ.

ಎನ್‌ ಎಸ್‌ ಓ ಟೆಕ್ನಾಲಾಜೀಸ್‌ ಗುಂಪಿನ ಸಂಸ್ಥೆಯೊಂದಿಗೆ ರಕ್ಷಣಾ ಸಚಿವಾಲಯ ಯಾವುದೇ ಖರೀದಿ, ಮಾರಾಟದ ವಹಿವಾಟು ನಡೆಸಿಲ್ಲ ಎಂದು ರಕ್ಷಣಾ ಖಾತೆ ರಾಜ್ಯ ಸಚಿವ ಅಜಯ್‌ ಭಟ್‌ ರಾಜ್ಯಸಭೆಗೆ ನೀಡಿರುವ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

ಎನ್‌ ಎಸ್‌ ಓ ಟೆಕ್ನಾಲಜೀಸ್‌ ಗುಂಪಿನೊಂದಿಗೆ ಸರ್ಕಾರ ಯಾವುದೇ ವಹಿವಾಟು ನಡೆಸಿದೆಯೇ ಎಂಬ ಸಿಪಿಎಂ ಪಕ್ಷದ ರಾಜ್ಯಸಭಾ ಸದಸ್ಯ ವಿ. ಶಿವದಾಸನ್‌ ಪ್ರಶ್ನೆಗೆ ಸಚಿವರು ಈ ಉತ್ತರ ನೀಡಿದ್ದಾರೆ.

ಪೆಗಾಸಸ್‌ ಗೂಢಚರ್ಯೆ ಬಗ್ಗೆ ಸಂಸದೀಯ ಸಮಿತಿಯಿಂದ ತನಿಖೆಯ ಜೊತೆಗೆ ಸಂಸತ್ತಿನಲ್ಲಿ ಈ ವಿಷಯದ ಚರ್ಚೆಗೆ ಆಗ್ರಹಿಸಿ ಪ್ರತಿಪಕ್ಷಗಳು ಮಳೆಗಾಲದ ಸಂಸತ್ತಿನ ಅಧಿವೇಶನ ಆರಂಭಗೊಂಡಂದಿನಿಂದ ಉಭಯ ಸದನಗಳಲ್ಲಿ ನಿರಂತರವಾಗಿ ಪ್ರತಿಭಟನೆ ನಡೆಸುತ್ತಿರುವುದರಿಂದ ಕಲಾಪವನ್ನು ಪದೇ ಪದೇ ಮುಂದೂಡಲಾಗುತ್ತಿದೆ.

ಸಂಸತ್ತಿನ ಉಭಯ ಸದನಗಳಲ್ಲಿ ಸರ್ಕಾರ ವಿವಿಧ ವಿಧೇಯಕಗಳನ್ನು ಮಂಡಿಸುತ್ತಿದ್ದರೂ, ಅವುಗಳ ಕುರಿತು ಕನಿಷ್ಟ ಪ್ರಮಾಣದ ಚರ್ಚೆಗಳಾಗುತ್ತಿವೆ. ಪೆಗಾಸಸ್‌ ವಿಷಯ ಮುಂದಿಟ್ಟುಕೊಂಡು ಪ್ರತಿಪಕ್ಷಗಳು ಪ್ರತಿಭಟನೆ ನಡೆಸುತ್ತಿರುವುದರಿಂದ ಪ್ರಶ್ನೋತ್ತರ ಅವಧಿ, ಶೂನ್ಯ ವೇಳೆ ಕಲಾಪಗಳು ಕೊಚ್ಚಿಹೋಗುತ್ತಿವೆ.

SCROLL FOR NEXT