ದೇಶ

ನಿಯಮ ಎಲ್ಲರಿಗೂ ನ್ಯಾಯಯುತವಾಗಿ, ನಿಷ್ಪಕ್ಷಪಾತವಾಗಿರುತ್ತದೆ: ಕಾಂಗ್ರೆಸ್ ನಾಯಕರ ಖಾತೆಗಳನ್ನು ತಡೆಹಿಡಿದ ಟ್ವಿಟ್ಟರ್ ಸ್ಪಷ್ಟನೆ 

Sumana Upadhyaya

ನವದೆಹಲಿ: ಹಲವು ಕಾಂಗ್ರೆಸ್ ನಾಯಕರ ಖಾತೆಗಳನ್ನು ತಡೆಹಿಡಿದಿರುವ ಕ್ರಮದ ಬಗ್ಗೆ ಸ್ಪಷ್ಟನೆ ನೀಡಿರುವ ಟ್ವಿಟ್ಟರ್ ಸಂಸ್ಥೆ ನಿಯಮ ಎಲ್ಲರಿಗೂ ನಿಷ್ಪಕ್ಷಪಾತವಾಗಿ, ನ್ಯಾಯಯುತವಾಗಿ ಅನ್ವಯವಾಗುತ್ತದೆ ಎಂದು ಹೇಳಿದೆ.

ಈ ಬಗ್ಗೆ ಹೇಳಿಕೆ ನೀಡಿರುವ ಟ್ವಿಟ್ಟರ್ ವಕ್ತಾರ, ಸೋಷಿಯಲ್ ಮೀಡಿಯಾದ ನಿಯಮಗಳನ್ನು ಮೀರಿದ ಯಾರೇ ಆದರೂ ಅವರ ವಿರುದ್ಧ ಕ್ರಮ ಪೂರ್ವಭಾವಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದೆ.

ನಮ್ಮ ಸೇವೆಯಲ್ಲಿರುವ ಎಲ್ಲರಿಗೂ ಟ್ವಿಟರ್ ನಿಯಮಗಳನ್ನು ನ್ಯಾಯಯುತವಾಗಿ ಮತ್ತು ನಿಷ್ಪಕ್ಷಪಾತವಾಗಿ ಜಾರಿಗೊಳಿಸಲಾಗಿದೆ. ನಮ್ಮ ನಿಯಮಗಳನ್ನು ಉಲ್ಲಂಘಿಸುವಂತಹ ಚಿತ್ರವನ್ನು ಪೋಸ್ಟ್ ಮಾಡಿದ ಹಲವಾರು ಟ್ವೀಟ್‌ಗಳ ಮೇಲೆ ನಾವು ಪೂರ್ವಭಾವಿಯಾಗಿ ಕ್ರಮ ಕೈಗೊಂಡಿದ್ದೇವೆ, ಅದನ್ನು ಮುಂದುವರಿಸಿಕೊಂಡು ಹೋಗುತ್ತೇವೆ. ಕೆಲವು ರೀತಿಯ ಖಾಸಗಿ ಮಾಹಿತಿಗಳು ಹೆಚ್ಚಿನ ಅಪಾಯಗಳನ್ನು ಹೊಂದಿರುತ್ತದೆ. ನಮ್ಮ ಗುರಿ ಯಾವಾಗಲೂ ವ್ಯಕ್ತಿಗಳ ಗೌಪ್ಯತೆ ಮತ್ತು ಸುರಕ್ಷತೆಯನ್ನು ರಕ್ಷಿಸುವುದಾಗಿರುತ್ತದೆ ಎಂದು ವಕ್ತಾರರು ಹೇಳಿಕೆಯಲ್ಲಿ ವಿವರಿಸಿದ್ದಾರೆ.

ಖಾತೆಗಳನ್ನು ನಿರ್ಬಂಧಿಸುವ ಹಿಂದಿನ ಕಾರಣವನ್ನು ಉಲ್ಲೇಖಿಸಿರುವ ಸಂಸ್ಥೆ, ಲೈಂಗಿಕ ದೌರ್ಜನ್ಯಕ್ಕೊಳಗಾದವರ (ಮತ್ತು ಅಪ್ರಾಪ್ತ ವಯಸ್ಕರ) ಹೆತ್ತವರ ಗುರುತನ್ನು ಬಹಿರಂಗಪಡಿಸುವ ಆಪಾದಿತ ವಿಷಯದ ಬಗ್ಗೆ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು (NCPCR) ಎಚ್ಚರಿಸಿತ್ತು, ಭಾರತೀಯ ಕಾನೂನಿನಡಿಯಲ್ಲಿ ನಾವು ಟ್ವಿಟ್ಟರ್ ನೀತಿ-ನಿಯಮಗಳನ್ನು ಮತ್ತೆ ಪರಾಮರ್ಶಿಸಿದೆವು. ನಮ್ಮ ಸಹಾಯ ಕೇಂದ್ರದಲ್ಲಿ ವಿವರಿಸಿದಂತೆ, ಟ್ವಿಟರ್ ನಿಯಮಗಳನ್ನು ಉಲ್ಲಂಘಿಸಿರುವುದು ಕಂಡುಬಂದಲ್ಲಿ ಖಾತೆದಾರರಿಗೆ ಸೂಚನೆ ನೀಡುತ್ತೇವೆ, ಅವರು ಇನ್ನೂ ಆ ಟ್ವೀಟ್ ಅಳಿಸದೇ ಇದ್ದಲ್ಲಿ, ಖಾತೆಯನ್ನು ತಡೆಹಿಡಿಯುತ್ತೇವೆ ಎಂದು ವಿವರಿಸಿದ್ದಾರೆ.

ರಾಹುಲ್ ಗಾಂಧಿ ಮತ್ತು ಇತರ ಕಾಂಗ್ರೆಸ್ ನಾಯಕರ ಟ್ವಿಟ್ಟರ್ ಖಾತೆಗಳನ್ನು ತಡೆಹಿಡಿದ ನಂತರ ಇಂದು ಕಾಂಗ್ರೆಸ್ ಅಧಿಕೃತ ಖಾತೆಯನ್ನು ಸಹ ತಡೆಹಿಡಿಯಲಾಗಿದೆ. 

SCROLL FOR NEXT