ದೇಶ

ಕಾನ್ಫುರದಲ್ಲಿ ಮುಸ್ಲಿಂ ವ್ಯಕ್ತಿ ಮೇಲೆ ಹಲ್ಲೆ ಪ್ರಕರಣ; ಭಜರಂಗದಳ ಕಾರ್ಯಕರ್ತ ಸೇರಿ ಮೂವರ ಬಂಧನ

Nagaraja AB

ಕಾನ್ಫುರ: ಜೈ ಶ್ರೀರಾಮ್ ಮಂತ್ರ ಜಪಿಸುವಂತೆ ಒತ್ತಾಯಿಸಿ ಮುಸ್ಲಿಂ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಭಜರಂಗ ದಳದ ಕಾರ್ಯಕರ್ತನೊಬ್ಬ ಸೇರಿದಂತೆ ಮೂವರನ್ನು ಬಂಧಿಸಲಾಗಿದೆ ಎಂದು ಉತ್ತರ ಪ್ರದೇಶ ಪೊಲೀಸರು ಗುರುವಾರ ತಡರಾತ್ರಿ ತಿಳಿಸಿದ್ದಾರೆ.

ಜೈ ಶ್ರೀರಾಮ್ ಮಂತ್ರ ಜಪಿಸುವಂತೆ  ಒತ್ತಾಯಿಸಿ ಆಟೋ ರಿಕ್ಷಾ ಡ್ರೈವರ್ ಅಪ್ಸಾರ್ ಅಹ್ಮದ್ ಮೇಲೆ ಗುಂಪೊಂದು ಹಲ್ಲೆ ನಡೆಸುತ್ತಿರುವ ವಿಡಿಯೋ ಬುಧವಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ತನ್ನ ತಂದೆಗೆ ಹೊಡೆಯಬೇಡಿ ಎಂದು ಅಳುತ್ತಾ ಮೊರೆಹಿಡುವ ಅಪ್ರಾಪ್ತ ವಯಸ್ಸಿನ ಬಾಲಕಿ ಕೂಡಾ ವಿಡಿಯೋದಲ್ಲಿತ್ತು. ಪೊಲೀಸರು ಠಾಣೆಗೆ ಕರೆದೊಯ್ಯುವ ಮೂಲಕ ಆ ವ್ಯಕ್ತಿಯನ್ನು ರಕ್ಷಿಸಿದ್ದರು.

ಅಜಯ್ ಆಲಿಯಾಸ್ ರಾಜೀಶ್ ಬಂದ್ವಾಳ, ಅಮನ್ ಗುಪ್ತಾ ಹಾಗೂ ರಾಹುಲ್ ಕುಮಾರ್  ಬಂಧಿತ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ. ಸಂತ್ರಸ್ತ ಪೊಲೀಸರಿಗೆ ನೀಡಿದ ದೂರಿನಲ್ಲಿ ಅಜಯ್ ಹೆಸರನ್ನು ಉಲ್ಲೇಖಿಸಿದ್ದ, ಇನ್ನಿಬ್ಬರನ್ನು  ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ವಿಡಿಯೋ ಆಧಾರದ ಮೇಲೆ ಬಂಧಿಸಲಾಗಿದೆ. ಈ ಪೈಕಿ ಅಮನ್ ಭಜರಂಗದಳದ ಪದಾಧಿಕಾರಿಯಾಗಿದ್ದಾನೆ. 

ಹಿಂಸಾಚಾರ, ಅಪರಾಧ ಉದ್ದೇಶ ಮತ್ತು ಸ್ವಯಂ ಪ್ರೇರಿತವಾಗಿ ಅವಮಾನ ಮಾಡಿದ್ದ ಕಾರಣಕ್ಕೆ ಐವರು ಹೆಸರಿಸಲಾದ ವ್ಯಕ್ತಿಗಳು ಹಾಗೂ ಎಂಟರಿಂದ 10 ಮಂದಿ ಅಪರಿಚಿತರ ವಿರುದ್ಧ ಪೊಲೀಸರು ಎಫ್ ಐಆರ್ ದಾಖಲಿಸಿದ್ದಾರೆ. ಬಂಧನ ಕಾರಣಕ್ಕಾಗಿ ಎಡ- ಪಂಥೀಯ ಭಜರಂಗ ದಳ ಕಾರ್ಯಕರ್ತರು ಗುರುವಾರ ತಡರಾತ್ರಿ ಪೊಲೀಸರು ಮುತ್ತಿಗೆ ಹಾಕಿ, ಡಿಪಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ನ್ಯಾಯಯುತವಾಗಿ ತನಿಖೆ ನಡೆಸುವುದಾಗಿ ಪೊಲೀಸರು ಭರವಸೆ ನೀಡಿದ್ದಾರೆ.

ಕಾನ್ಫುರದ ಕಚ್ಚಿ ಬಸ್ತಿಯಲ್ಲಿ ಪ್ರತ್ಯೇಕ ಕೋಮಿನ ಇಬ್ಬರ ನಡುವಿನ ವಿವಾದಕ್ಕೆ ಸಂಬಂಧಿಸಿದಂತೆ ಹಲ್ಲೆ ನಡೆದಿದೆ. ಎರಡು ಕುಟುಂಬಗಳು ಪರಸ್ಪರರ ವಿರುದ್ಧ ಈ ಹಿಂದೆ ದೂರು ದಾಖಲಿಸಿದ್ದರು ಎಂದು ಸಹಾಯಕ ಪೊಲೀಸ್ ಆಯುಕ್ತ ವಿಕಾಸ್ ಪಾಂಡೆ ತಿಳಿಸಿದ್ದಾರೆ.  

ಗುರುವಾರ ಮಧ್ಯಾಹ್ನ ಸುಮಾರು 3 ಗಂಟೆ ವೇಳೆಯಲ್ಲಿ ನನ್ನ ಮೇಲೆ ಹಲ್ಲೆ ನಡೆಸಿ , ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಹಾಕಲಾಗಿದೆ. ಪೊಲೀಸರಿಂದ ಪ್ರಾಣ ಉಳಿದಂತಾಗಿದೆ ಎಂದು ದೂರಿನಲ್ಲಿ ಮುಸ್ಲಿಂ ವ್ಯಕ್ತಿ ತಿಳಿಸಿದ್ದರು.
ಭಜರಂಗ ದಳದ ಸಭೆ ನಂತರ ಈ ದಾಳಿ ನಡೆದಿದೆ. ಹಿಂದೂ ಹುಡುಗಿಯರನ್ನು ಮುಸ್ಲಿಂ ಧರ್ಮಕ್ಕೆ ಮತಾಂತರ ಮಾಡಲಾಗುತ್ತಿದೆ ಎಂದು ಭಜರಂಗದಳದ ಕಾರ್ಯಕರ್ತರು ಸಭೆಯಲ್ಲಿ ಹೇಳಿದ್ದರು.

SCROLL FOR NEXT