ದೇಶ

ಸ್ವಾತಂತ್ರ್ಯದ ಅಮೃತ ಮಹೋತ್ಸವ: 'ಫಿಟ್ ಇಂಡಿಯಾ ಫ್ರೀಡಂ ರನ್ 2.0' ಅಭಿಯಾನಕ್ಕೆ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಚಾಲನೆ

Sumana Upadhyaya

ನವದೆಹಲಿ: ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವ ಅಂಗವಾಗಿ ಕೇಂದ್ರ ಸರ್ಕಾರ ಆಜಾದ್ ಕಿ ಅಮೃತ ಮಹೋತ್ಸವ ಫಿಟ್ ಇಂಡಿಯಾ ಸ್ವಾತಂತ್ರ್ಯದ ಓಟ 2.0 ಅಭಿಯಾನವನ್ನು ಹಮ್ಮಿಕೊಂಡಿದ್ದು ದೇಶದ ನಾಗರಿಕರು ಭಾಗವಹಿಸಬಹುದೆಂದು ಕರೆ ನೀಡಿದೆ.

ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಣೆಯ ಭಾಗವಾಗಿ ದೇಶಾದ್ಯಂತ ಇಂದು ಆಯೋಜಿಸಿರುವ ಫಿಟ್ ಇಂಡಿಯಾ ಸ್ವಾತಂತ್ರ್ಯದ ಓಟ ೨.೦ಗೆ ಕೇಂದ್ರ ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಅನುರಾಗ್ ಸಿಂಗ್ ಠಾಕೂರ್ ದೆಹಲಿಯ ಮೇಜರ್ ಧ್ಯಾನ್‌ಚಂದ್ ಕ್ರೀಡಾಂಗಣದಲ್ಲಿ ಚಾಲನೆ ನೀಡಿ ಬಳಿಕ ಓಟದಲ್ಲಿ ಭಾಗವಹಿಸಿದರು.

ಕ್ರೀಡಾ ಸಚಿವರು ಫಿಟ್ ಇಂಡಿಯಾ ಫ್ರೀಡಂ ರನ್ 2.0ದ ಪ್ರತಿಜ್ಞಾ ವಿಧಿಯನ್ನು ವಿಡಿಯೊ ಕಾನ್ಫರೆನ್ಸ್ ಮೂಲಕ ಬೋಧಿಸಿದರು. ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವವನ್ನು ಆಚರಿಸುವ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಫಿಟ್ ಇಂಡಿಯಾ ಫ್ರೀಡಂ ರನ್ 2.0 ದೇಶಾದ್ಯಂತ ಪ್ರಾರಂಭಿಸಿದೆ. ದೇಶದ 75 ಪ್ರಮುಖ ಕೇಂದ್ರಗಳಲ್ಲಿ ಏಕಕಾಲದಲ್ಲಿ ಆರಂಭವಾಗಿದೆ. ಗಾಂಧಿ ಜಯಂತಿ ಅಕ್ಟೋಬರ್ 2ರವರೆಗೆ ಅದು ಮುಂದುವರಿಯಲಿದೆ. ಪ್ರತಿ ಜಿಲ್ಲೆಯ 75 ಗ್ರಾಮಗಳು ಇದರಲ್ಲಿ ಭಾಗಿಯಾಗಲಿವೆ ಎಂದು ಮಾಹಿತಿ ನೀಡಿದರು.

ನಾವು ನಮ್ಮ ಸ್ವಾತಂತ್ರ್ಯದ 75ನೇ ವರ್ಷಾಚರಣೆಯಿಂದ 100 ನೇ ವರ್ಷಕ್ಕೆ ಹೋಗುವಾಗ ಮುಂದಿನ 25 ವರ್ಷಗಳಲ್ಲಿ ನಾವು ದೇಶವನ್ನು ಯಾವ ದಿಕ್ಕಿನಲ್ಲಿ ತೆಗೆದುಕೊಳ್ಳಲು ಬಯಸುತ್ತೇವೆ ಎಂಬುದನ್ನು ನೋಡುವುದು ನಮ್ಮೆಲ್ಲರ ಮೇಲೆ ಅವಲಂಬಿತವಾಗಿರುತ್ತದೆ. ನಾವು ಫಿಟ್ ಆಗಿ ಇದ್ದರೆ ಮಾತ್ರ ಅದು ಸಾಧ್ಯ ಎಂದು ಕ್ರೀಡಾ ಸಚಿವರು ಹೇಳಿದರು.

ಅಕ್ಟೋಬರ್ 2ರವರೆಗೆ ಪ್ರತಿ ಗ್ರಾಮ ಮತ್ತು ಜಿಲ್ಲೆಗಳ ಜನರು ಇದರಲ್ಲಿ ಭಾಗಿಯಾಗುತ್ತಾರೆ. ಕಳೆದ ವರ್ಷ 5 ಕೋಟಿ ಮಂದಿ ಭಾಗಿಯಾಗಿದ್ದರು. ಈ ಬಾರಿ 7.5 ಕೋಟಿ ಜನರು ನೇರವಾಗಿ ನಮ್ಮ ಜೊತೆ ಭಾಗಿಯಾಗುತ್ತಾರೆ. ಅಭಿಯಾನದ ಪ್ರಕ್ರಿಯೆ ಸಾಗುತ್ತಾ ಹೋದಂತೆ ಇನ್ನಷ್ಟು ಮಂದಿ ಸೇರ್ಪಡೆಯಾಗಬಹುದು ಎಂಬ ನಂಬಿಕೆಯಿದೆ ಎಂದರು.

ಅಮೃತಸರದ ಅಟ್ಟಾರಿ-ವಾಘಾ ಗಡಿಯಲ್ಲಿ ಫಿಟ್ ಇಂಡಿಯಾ ಫ್ರೀಡಂ ರನ್ 2.0 ಅಭಿಯಾನದಲ್ಲಿ ಭಾಗಿಯಾದ ಬಿಎಸ್ ಎಫ್ ಯೋಧರು ನಂತರ ಓಟದಲ್ಲಿ ಭಾಗಿಯಾದರು. ಮುಂಬೈಯ ಗೇಟ್ ವೇ ಆಫ್ ಇಂಡಿಯಾದಲ್ಲಿ ಆರಂಭಗೊಂಡ ಫಿಟ್ ಇಂಡಿಯಾ ಅಭಿಯಾನದಲ್ಲಿ 40 ರಾಷ್ಟ್ರೀಯ ಭದ್ರತಾ ಪಡೆಯ ಕಮಾಂಡೊಗಳು ಭಾಗಿಯಾಗಿದ್ದರು.

SCROLL FOR NEXT