ದೇಶ

ಅಫ್ಘಾನಿಸ್ತಾನದಿಂದ ಸ್ಥಳಾಂತರ: ಮೂರು ವಿಮಾನಗಳಲ್ಲಿ ಸುಮಾರು 400 ಜನರನ್ನು ಸ್ವದೇಶಕ್ಕೆ ಕರೆತಂದ ಭಾರತ

Vishwanath S

ನವದೆಹಲಿ: ತಾಲಿಬಾನ್ ಸ್ವಾಧೀನಪಡಿಸಿಕೊಂಡ ನಂತರ ಕಾಬೂಲ್ ನಗರದಿಂದ ಇಲ್ಲಿಯವರೆಗೂ 329 ಭಾರತೀಯರು ಮತ್ತು ಇಬ್ಬರು ಅಫ್ಘಾನ್ ಶಾಸಕರು ಸೇರಿದಂತೆ ಸುಮಾರು 400 ಜನರನ್ನು ಮೂರು ವಿಭಿನ್ನ ವಿಮಾನಗಳಲ್ಲಿ ಸ್ವದೇಶಕ್ಕೆ ಕರೆತರಲಾಗಿದೆ.

107 ಭಾರತೀಯರು ಮತ್ತು 23 ಅಫ್ಘಾನ್ ಸಿಖ್ಖರು ಮತ್ತು ಹಿಂದುಗಳು ಸೇರಿದಂತೆ ಒಟ್ಟು 168 ಜನರನ್ನು ಕಾಬೂಲ್ ನಿಂದ ಭಾರತೀಯ ವಾಯುಪಡೆಯ(IAF) C-17 ಹೆವಿ-ಲಿಫ್ಟ್ ಮಿಲಿಟರಿ ಸಾರಿಗೆ ವಿಮಾನದ ಮೂಲಕ ದೆಹಲಿಯ ಸಮೀಪದ ಹಿಂಡನ್ ವಾಯುನೆಲೆಗೆ ಕರೆತರಲಾಯಿತು.

87 ಭಾರತೀಯರು ಮತ್ತು ಇಬ್ಬರು ನೇಪಾಳಿ ಪ್ರಜೆಗಳ ಇನ್ನೊಂದು ತಂಡವನ್ನು ದುಶನ್‌ಬೆಯಿಂದ ಏರ್ ಇಂಡಿಯಾ ವಿಮಾನದಲ್ಲಿ ವಾಪಸ್ ಕರೆತರಲಾಯಿತು. ಅವರನ್ನು ಐಎಎಫ್ ವಿಮಾನದಲ್ಲಿ ತಜಕಿಸ್ತಾನದ ರಾಜಧಾನಿಗೆ ಸ್ಥಳಾಂತರಿಸಿದ ಒಂದು ದಿನದ ನಂತರ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರತ್ಯೇಕವಾಗಿ, ಕಳೆದ ಕೆಲವು ದಿನಗಳಲ್ಲಿ ಅಮೆರಿಕ ಮತ್ತು ನ್ಯಾಟೋ ವಿಮಾನಗಳ ಮೂಲಕ ಕಾಬೂಲ್ ನಿಂದ ದೋಹಾಕ್ಕೆ ಸ್ಥಳಾಂತರಿಸಲ್ಪಟ್ಟ 135 ಭಾರತೀಯರ ತಂಡವನ್ನು ವಿಶೇಷ ವಿಮಾನದಲ್ಲಿ ದೋಹಾದಿಂದ ದೆಹಲಿಗೆ ಹಿಂತಿರುಗಿಸಲಾಯಿತು ಎಂದು ಅವರು ಹೇಳಿದರು.

ಭಾರತವು ಅಮೆರಿಕ, ಕತಾರ್, ತಜಕಿಸ್ತಾನ್ ಮತ್ತು ಇತರ ಹಲವು ಸ್ನೇಹಪರ ದೇಶಗಳೊಂದಿಗೆ ಸಮನ್ವಯದಿಂದ ತೆರವು ಕಾರ್ಯಾಚರಣೆಗಳನ್ನು ನಡೆಸಿತು.

ಕಾಬೂಲ್‌ನಿಂದ ಸ್ಥಳಾಂತರಿಸಲ್ಪಟ್ಟ 168 ಜನರ ತಂಡದಲ್ಲಿ ಅಫ್ಘಾನಿಸ್ತಾನದ ಶಾಸಕರಾದ ಅನಾರ್ಕಲಿ ಹೊನ್ಯಾರ್ ಮತ್ತು ನರೇಂದರ್ ಸಿಂಗ್ ಖಾಲ್ಸಾ ಮತ್ತು ಅವರ ಕುಟುಂಬಗಳು ಸೇರಿದ್ದವು ಎಂದು ಸ್ಥಳಾಂತರಿಸುವ ಕಾರ್ಯಾಚರಣೆಯ ಪರಿಚಯವಿರುವ ಜನರು ತಿಳಿಸಿದ್ದಾರೆ.

SCROLL FOR NEXT