ದೇಶ

ಥಾಣೆ: ಒತ್ತುವರಿ ತೆರವು ಕಾರ್ಯಾಚರಣೆಯಲ್ಲಿದ್ದ ಅಧಿಕಾರಿ ಮೇಲೆ ಮಾರಣಾಂತಿಕ ಹಲ್ಲೆ, 3 ಬೆರಳು ತುಂಡು, ತಲೆಗೆ ಗಾಯ!

Srinivas Rao BV

ಥಾಣೆ: ಒತ್ತುವರಿ ತೆರವು ಕಾರ್ಯಾಚರಣೆಯಲ್ಲಿ ನಿರತರಾಗಿದ್ದ ನಗರಸಭೆ ಸಹಾಯಕ ಆಯುಕ್ತೆ (ಎಎಂಸಿ) ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದ್ದು, ಘಟನೆಯಲ್ಲಿ ಅಧಿಕಾರಿಯ ಮೂರು ಬೆರಳು ತುಂಡಾಗಿದ್ದು, ತಲೆಗೆ ತೀವ್ರ ಗಾಯಗಳುಂಟಾಗಿವೆ.

ಬೀದಿ ವ್ಯಾಪಾರಿ ಮಹಿಳಾ ಅಧಿಕಾರಿ ವಿರುದ್ಧ ಚಾಕುವಿನಿಂದ ಇರಿದಿದ್ದು ನಗರ ಸಭೆ ಈ ದಾಳಿಯನ್ನು ಖಂಡಿಸಿದೆ.

ಕಲ್ಪಿತ ಪಿಂಪಲ್, ಮಾಜಿವಾಡ-ಮಾನ್ಪಾಡ ಪ್ರದೇಶದ ಎಎಂಸಿ ಆಗಿದ್ದು ಕಸರ್ವಾಡವಾಲಿ ಜಂಕ್ಷನ್ ನಲ್ಲಿ ಬೀದಿ ವ್ಯಾಪಾರಿಗಳಿದ್ದ ಪ್ರದೇಶದಲ್ಲಿ ತೆರವು ಕಾರ್ಯಾಚರಣೆಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು. ಈ ವೇಳೆ ಬೀದಿ ಬದಿ ವ್ಯಾಪಾರಿಯೊಬ್ಬರು ಚಾಕುವಿನಿಂದ ಆಕೆಯ ಮೇಲೆ ದಾಳಿ ನಡೆಸಿದ್ದಾನೆ. ಈ ಘಟನೆಯಲ್ಲಿ ಅಧಿಕಾರಿ ಮೂರು ಬೆರಳುಗಳನ್ನು ಕಳೆದುಕೊಂಡಿದ್ದು, ತಲೆಗೆ ತೀವ್ರವಾಗಿ ಗಾಯಗಳಾಗಿವೆ.

ಆಕೆಯ ಭದ್ರತಾಧಿಕಾರಿಯೂ ಅಧಿಕಾರಿಯನ್ನು ರಕ್ಷಿಸಲು ಹೋಗಿ ಕೈಬೆರಳನ್ನು ಕಳೆದುಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರತ್ಯಕ್ಷದರ್ಶಿಯ ಪ್ರಕಾರ ಆರೋಪಿಯನ್ನು ಅಮರ್ ಯಾದವ್ ಎಂದು ಗುರುತಿಸಲಾಗಿದ್ದು ಘಟನೆಯ ನಂತರ ಆತ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದ ಆದರೆ ಆತನನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿ ಕೂಗುತ್ತಿರುವುದು ಹಾಗೂ ಚೂರಿಯನ್ನು ತೋರುತ್ತಿರುವ ವಿಡಿಯೋ ವೈರಲ್ ಆಗತೊಡಗಿದೆ. ಕಸರ್ವಾಡವಾಲಿ ಪೊಲೀಸರು ಯಾದವ್ ನ್ನು ಬಂಧಿಸಿದ್ದು ಸೆಕ್ಷನ್ 307 ರ ಅಡಿಯಲ್ಲಿ ಹತ್ಯೆ ಯತ್ನ, 353 ರ ಅಡಿಯಲ್ಲಿ ಸಾರ್ವಜನಿಕ ಸೇವೆಯಲ್ಲಿರುವ ಅಧಿಕಾರಿಯ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದು ಸೇರಿದಂತೆ ಹಲವು ಪ್ರಕರಣಗಳನ್ನು ದಾಖಲಿಸಿದ್ದಾರೆ.

ಹಲ್ಲೆಗೊಳಗಾದ ಮಹಿಳಾ ಅಧಿಕಾರಿಯನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಆಕೆಯ ಕೈಬೆರಳುಗಳನ್ನು ಮರುಜೋಡಿಸುವ ಶಸ್ತ್ರಚಿಕಿತ್ಸೆ ನೆರವೇರಿಸಲಾಗಿದ್ದು ಚಿಕಿತ್ಸೆ ಮುಂದುವರೆದಿದೆ. ಮೇಯರ್ ನರೇಶ್ ಮಸ್ಕೆ ಘಟನೆಯ ಬಗ್ಗೆ ಆತಂಕ ವ್ಯಕ್ತಪಡಿಸಿದ್ದು, ಇಂತಹ ಘಟನೆಗಳು ಸ್ಥಳೀಯ ಸಂಸ್ಥೆ ಅಧಿಕಾರಿಗಳಿಗೆ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲು ಅಧೈರ್ಯ ಮೂಡಿಸುತ್ತದೆ ಎಂದು ಹೇಳಿದ್ದಾರೆ. ಅಧಿಕಾರಿ ಹಾಗೂ ಅವರ ಭದ್ರತಾ ಸಿಬ್ಬಂದಿಯ ಚಿಕಿತ್ಸೆಗೆ ನಗರಸಭೆ ಖರ್ಚು ವೆಚ್ಚಗಳನ್ನು ಭರಿಸಲಿದೆ ಎಂದೂ ಮೇಯರ್ ತಿಳಿಸಿದ್ದಾರೆ.

SCROLL FOR NEXT