ದೇಶ

ಕಡಲ ಪ್ರದೇಶದಲ್ಲಿ ಯಾವುದೇ ಅಪಾಯವನ್ನೂ ಎದುರಿಸಲು ಭಾರತ ಸನ್ನದ್ಧ: ಚೀನಾಗೆ ನೌಕಾಪಡೆ ಮುಖ್ಯಸ್ಥ ಸಂದೇಶ

Srinivas Rao BV

ನವದೆಹಲಿ: ಭಾರತದ ಕಡಲ ಪ್ರದೇಶದ ಹಿತಾಸಕ್ತಿಯನ್ನು ಕಾಪಾಡಿಕೊಳ್ಳುವ ವಿಷಯದಲ್ಲಿ ಭಾರತೀಯ ನೌಕಾಪಡೆ ಸಂಪೂರ್ಣ ವಿಶ್ವಾಸ ಹೊಂದಿದೆ ಎಂದು ನೌಕಾಪಡೆಯ ಅಡ್ಮಿರಲ್ ಆರ್ ಹರಿಕುಮಾರ್ ಹೇಳಿದ್ದಾರೆ. 

ಡಿ.03 ರಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿರುವ ಆರ್ ಹರಿಕುಮಾರ್, ಪ್ರಸ್ತಾವಿತ ಸಮುದ್ರ ಕಮಾಂಡ್ ಗೆ ಸಂಬಂಧಿಸಿದಂತೆ ಕೆಲಸ ನಡೆಯುತ್ತಿದೆ, ಅದರ ಮೂಲಭೂತ ರಚನೆ ಮುಂದಿನ ವರ್ಷದ ವೇಳೆಗೆ ಲಭ್ಯವಾಗಬಹುದು, ದೇಶ ಎದುರಿಸುತ್ತಿರುವ ಸಮಸ್ಯೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಆಯಕಟ್ಟಿನ ವೇದಿಕೆಗಳನ್ನು ಭಾರತ ಸ್ವಾಧೀನಪಡಿಸಿಕೊಳ್ಳುತ್ತಿದೆ ಎಂದು ತಿಳಿಸಿದ್ದಾರೆ.
 
ಭಾರತೀಯ ನೌಕಾಪಡೆಯಲ್ಲಿ ಮಹಿಳೆಯರನ್ನು ಒಳಗೊಳ್ಳುವಂತೆ ಮಾಡಲು, ಅವರ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಲು ಕೆಲಸ ಮಾಡಲಾಗುತ್ತಿದೆ ಎಂದು ನೌಕಾಪಡೆಯ ಮುಖ್ಯಸ್ಥರು ಮಾಹಿತಿ ನೀಡಿದ್ದಾರೆ. 

ಇದೇ ವೇಳೆ ಚೀನಾದ ಬಗ್ಗೆಯೂ ಮಾತನಾಡಿರುವ ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ಆರ್ ಹರಿಕುಮಾರ್, ಹಿಂದೂ ಮಹಾಸಾಗರದಲ್ಲಿ ಚೀನಾ ಮುನ್ನುಗ್ಗುವ ಘಟನೆಗಳ ಬಗ್ಗೆ ನೌಕಾಪಡೆ ನಿಗಾ ವಹಿಸುತ್ತಿದೆ, ಅದರ ಚಟುವಟಿಕೆಗಳನ್ನು ಗಮನಿಸಲಾಗುತ್ತಿದೆ ಎಂದು ಅಡ್ಮಿರಲ್ ಕುಮಾರ್ ಹೇಳಿದ್ದಾರೆ.

ಉತ್ತರದ ಗಡಿಗಳಲ್ಲಿನ ಪರಿಸ್ಥಿತಿ ಹಾಗೂ ಕೋವಿಡ್-19 ರಾಷ್ಟ್ರಿಯ ಭದ್ರತೆಗೆ ಸಂಬಂಧಿಸಿದ ಸಂಕೀರ್ಣತೆಗಳನ್ನು ಹೆಚ್ಚಿಸಿದೆ, ಇಂತಹ ಪರಿಸ್ಥಿತಿಯಲ್ಲಿ ಯಾವುದೇ ಭದ್ರತಾ ಸವಾಲನ್ನು ಎದುರಿಸಲು ನೌಕಾ ಪಡೆ ಸರ್ವಸನ್ನದ್ಧವಾಗಿದೆ ಎಂದು ಅಡ್ಮಿರಲ್ ಆರ್ ಹರಿಕುಮಾರ್ ಮಾಹಿತಿ ನೀಡಿದ್ದಾರೆ. 

SCROLL FOR NEXT