ದೇಶ

ಕೃಷಿ ಕಾಯ್ದೆ ವಿರೋಧಿಸಿ ನಡೆದ ಹೋರಾಟದಲ್ಲಿ ರೈತರು ಸಾವನ್ನಪ್ಪಿಲ್ಲ: ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್

Vishwanath S

ನವದೆಹಲಿ: ಕೃಷಿ ಕಾಯ್ದೆ ವಿರೋಧಿಸಿ ರೈತರು ನಡೆಸಿದ ಹೋರಾಟದಲ್ಲಿ ಪೊಲೀಸರು ಕೈಗೊಂಡ ಕ್ರಮದಿಂದಾಗಿ ರೈತರು ಸಾವನ್ನಪ್ಪಿಲ್ಲ ಎಂದು ಚಳಿಗಾಲದ ಅಧಿವೇಶನದಲ್ಲಿ ಕೇಂದ್ರ ಸರ್ಕಾರ ಹೇಳಿದೆ.

ರೈತರು ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ಮೂರು ಕೃಷಿ ವಿರೋಧಿ ಕಾಯ್ದೆಯ ವಿರುದ್ಧ ಒಂದು ವರ್ಷ ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ 700ಕ್ಕೂ ಹೆಚ್ಚು ರೈತರು ಸಾವನ್ನಪ್ಪಿದ್ದಾರೆ ಎಂದು ರೈತರು ತಿಳಿಸಿದ್ದಾರೆ.

ಶುಕ್ರವಾರ ರಾಜ್ಯಸಭೆಗೆ ಲಿಖಿತ ಉತ್ತರ ನೀಡಿದ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, “ರೈತ ಚಳವಳಿಯಲ್ಲಿ ಸಾವನ್ನಪ್ಪಿದ ರೈತರ ಕುಟುಂಬಗಳಿಗೆ ನೀಡುವ ಪರಿಹಾರದ ವಿಷಯವು ರಾಜ್ಯ ಸರ್ಕಾರಗಳಿಗೆ ಸಂಬಂಧಿಸಿದೆ. ರೈತರ ಧರಣಿ ವೇಳೆ ಪೊಲೀಸರ ಕ್ರಮದಿಂದ ಯಾವುದೇ ರೈತ ಸಾವನ್ನಪ್ಪಿಲ್ಲ ಎಂದು ಹೇಳಿದರು.

ರೈತರ ಪ್ರತಿಭಟನೆ ವೇಳೆ ಸಾವನ್ನಪ್ಪಿದ ರೈತರ ಕುಟುಂಬಗಳಿಗೆ ಜೀವನೋಪಾಯಕ್ಕಾಗಿ ಪರಿಹಾರವನ್ನು ನೀಡಲು ಸರ್ಕಾರ ಯೋಜಿಸುತ್ತಿದೆಯೇ ಅಥವಾ ಒದಗಿಸುತ್ತಿದೆಯೇ ಎಂದು ಕಾಂಗ್ರೆಸ್ ನಾಯಕ ಧೀರಜ್ ಪ್ರಸಾದ್ ಸಾಹು ಮತ್ತು ಎಎಪಿ ನಾಯಕ ಸಂಜಯ್ ಸಿಂಗ್ ಅವರ ಜಂಟಿ ಪ್ರಶ್ನೆಗೆ ತೋಮರ್ ಪ್ರತಿಕ್ರಿಯಿಸಿದರು.

ರೈತರ ಉಗ್ರ ಹೋರಾಟಕ್ಕೆ ಮಣಿದ ಕೇಂದ್ರ ಸರ್ಕಾರ ಈ ಬಾರಿಯ ಚಳಿಗಾಲದ ಅಧಿವೇಶನದಲ್ಲಿ ಅಂದರೆ ನವೆಂಬರ್ 29ರಂದು ಕೃಷಿ ಕಾಯ್ದೆಗಳನ್ನು ಹಿಂದಕ್ಕೆ ತೆಗೆದುಕೊಂಡಿದೆ. ಪ್ರತಿಭಟನಾಕಾರರ ವಿರುದ್ಧದ ಪೊಲೀಸ್ ಪ್ರಕರಣಗಳನ್ನು ಹಿಂಪಡೆಯುವುದು ಮತ್ತು ಕನಿಷ್ಠ ಬೆಂಬಲ ಬೆಲೆ (ಎಂಎಸ್‍ಪಿ) ಸೇರಿದಂತೆ ಅವರ ಪ್ರಮುಖ ಬಾಕಿ ಇರುವ ಬೇಡಿಕೆಗಳನ್ನು ಕೇಂದ್ರ ಸರ್ಕಾರ ಅಂಗೀಕರಿಸಿದ ನಂತರ ದೆಹಲಿ ಗಡಿಯಲ್ಲಿ ವರ್ಷವಿಡೀ ನಡೆದ ಪ್ರತಿಭಟನೆಯನ್ನು ಸಂಯುಕ್ತ ಕಿಸಾನ್ ಮೋರ್ಚಾ(ಎಸ್‍ಕೆಎಂ) ಗುರುವಾರ ಸ್ಥಗಿತಗೊಳಿಸಿದೆ.

ಒಂದು ವರ್ಷದಿಂದ ನಡೆಯುತ್ತಿರುವ ಪ್ರತಿಭಟನೆಯಲ್ಲಿ ರೈತರ ಸಾವಿನ ವಿಷಯವನ್ನು ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ಪ್ರಶ್ನೆ ಮಾಡುತ್ತಿವೆ. ಬಾಕಿ ಉಳಿದಿರುವ ತಮ್ಮ ಪ್ರಮುಖ ಬೇಡಿಕೆಗಳನ್ನು ಅಂಗೀಕರಿಸಿ ಕೇಂದ್ರ ಸರ್ಕಾರದಿಂದ ಔಪಚಾರಿಕ ಪತ್ರವನ್ನು ಸ್ವೀಕರಿಸಿದ ನಂತರ ಪ್ರತಿಭಟನೆಯನ್ನು ಎಸ್‍ಕೆಎಂ ಸ್ಥಗಿತಗೊಳಿಸಿದ್ದು, ಗುರುವಾರ ರೈತರು ಡಿಸೆಂಬರ್ 11 ಅನ್ನು 'ವಿಜಯ್ ದಿವಸ್' ಎಂದು ಆಚರಿಸುತ್ತಾರೆ. ವಿಜಯೋತ್ಸವವನ್ನು ಕೈಗೊಂಡ ನಂತರ ಮನೆಗೆ ಹೋಗುತ್ತಾರೆ ಎಂದು ಹೇಳಿದರು.

SCROLL FOR NEXT