ದೇಶ

ಜೈಲಿನಲ್ಲಿರುವ ಮಗನ ಬಗ್ಗೆ ಕೇಳಿದ ವರದಿಗಾರರನ್ನು ನಿಂದಿಸಿದ ಕೇಂದ್ರ ಸಚಿವ ಅಜಯ್ ಮಿಶ್ರಾ, ವಿಡಿಯೋ ವೈರಲ್

Lingaraj Badiger

ಲಖಿಂಪುರ: ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ರೈತರ ಮೇಲೆ ಕಾರು ಹರಿಸಿದ ಆರೋಪದ ಮೇಲೆ ಜೈಲು ಪಾಲಾಗಿರುವ ಪುತ್ರನ ಬಗ್ಗೆ ಮಾಧ್ಯಮದವರು ಕೇಂದ್ರ ಸಚಿವ ಅಜಯ್ ಮಿಶ್ರಾ ಅವರನ್ನು ಕೇಳಿದ್ದಾರೆ. ಇದರಿಂದ ಆಕ್ರೋಶಗೊಂಡ ಸಚಿವರು ಮಾಧ್ಯಮಗಳನ್ನು ಅವಾಚ್ಯಶಬ್ಧಗಳಿಂದ ನಿಂದಿಸಿದ್ದಾರೆ.

ಈ ರೀತಿಯ ಮೂರ್ಖ ಪ್ರಶ್ನೆಗಳನ್ನು ಕೇಳಬೇಡಿ. ದಿಮಾಗ್ ಖರಾಬ್ ಹೈ ಕ್ಯಾ ಬಿ(ನಿಮ್ಮ ತಲೆ ಏನಾದ್ರೂ ಕೆಟ್ಟು ಹೋಗಿದೆಯಾ?) ಎಂದು ಸಚಿವರು ಪತ್ರಕರ್ತರನ್ನು ಮರು ಪ್ರಶ್ನಿಸಿದ್ದಾರೆ.

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಸರ್ಕಾರದಲ್ಲಿ ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವರಾದ ಮಿಶ್ರಾ ಅವರು ವರದಿಗಾರನ ಕೈಯಲ್ಲಿರುವ ಮೈಕ್ ಕಸಿದುಕೊಳ್ಳುತ್ತಾ, ಮೈಕ್ ಬಂದ್​​ ಕರೋ ಬೆ(ಮೈಕ್ ಮುಚ್ಚು) ಎನ್ನುವುದಲ್ಲದೇ ವರದಿಗಾರರನ್ನು “ಚೋರ್ (ಕಳ್ಳರು)” ಎಂದು ಕರೆದಿದ್ದಾರೆ.

ಲಖಿಂಪುರ ಖೇರಿಯಲ್ಲಿ ಆಕ್ಸಿಜನ್ ಸ್ಥಾವರವನ್ನು ಉದ್ಘಾಟಿಸಿದ ಸಚಿವರು, ನಿನ್ನೆ ತಮ್ಮ ಮಗನನ್ನು ಜೈಲಿನಲ್ಲಿ ಭೇಟಿ ಮಾಡಲು ಹೋದಾಗ ಈ ಘಟನೆ ನಡೆದಿದೆ.

ಅಕ್ಟೋಬರ್ 3 ರಂದು ಲಖಿಂಪುರ ಖೇರಿಯಲ್ಲಿ ನಡೆದ ರೈತರ ಹತ್ಯೆಯು “ಯೋಜಿತ ಪಿತೂರಿ” ಎಂದು ವಿಶೇಷ ತನಿಖಾ ತಂಡದ ವರದಿಯ ನಂತರ ಮಿಶ್ರಾ ಅವರನ್ನು ಕೇಂದ್ರ ಸಚಿವ ಸಂಪುಟದಿಂದ ವಜಾಗೊಳಿಸಬೇಕೆಂಬ ವಿರೋಧ ಪಕ್ಷಗಳ ಬೇಡಿಕೆ ಜೋರಾಗಿದೆ. “ಕೊಲೆ ಮಾಡುವ ಉದ್ದೇಶದಿಂದ” ಆಶಿಶ್ ಮಿಶ್ರಾ ಕಾರನ್ನು ಚಲಾಯಿಸಿ, ರೈತರನ್ನು ಸಾಯಿಸಿದ್ದಾರೆ ಎಂದು ಎಸ್ಐಟಿ ವರದಿ ಹೇಳಿದೆ.

SCROLL FOR NEXT