ದೇಶ

ಗೋಲ್ಡನ್ ಟೆಂಪಲ್​ನಲ್ಲಿ ನಡೆದ ಹತ್ಯೆ: ಎಸ್‌ಐಟಿ ರಚನೆ, 2 ದಿನದಲ್ಲಿ ವರದಿ ಸಲ್ಲಿಕೆ ಸಾಧ್ಯತೆ!

Vishwanath S

ಅಮೃತಸರ: ಡಿಸಿಪಿ ಕಾನೂನು ಮತ್ತು ಸುವ್ಯವಸ್ಥೆ ಅಡಿಯಲ್ಲಿ ವಿಶೇಷ ತನಿಖಾ ತಂಡವನ್ನು(ಎಸ್‌ಐಟಿ) ರಚಿಸಲಾಗಿದೆ. ಅದು ಮುಂದಿನ ಎರಡು ದಿನಗಳಲ್ಲಿ ತನ್ನ ವರದಿಯನ್ನು ಸಲ್ಲಿಸಲಿದೆ ಎಂದು ಪಂಜಾಬ್ ಉಪಮುಖ್ಯಮಂತ್ರಿ ಸುಖಜಿಂದರ್ ಸಿಂಗ್ ರಾಂಧವಾ ಭಾನುವಾರ ಹೇಳಿದ್ದಾರೆ.

ಶ್ರೀ ದರ್ಬಾರ್ ಸಾಹಿಬ್‌ನಲ್ಲಿ ನಡೆದ ಘಟನೆಯೂ ಅತ್ಯಂತ ದುರಾದೃಷ್ಟಕರ ಎಂದರು. ಅಲ್ಲದೇ ಪೊಲೀಸರು ಈ ಪ್ರಕರಣದ ಬಗ್ಗೆ ಸರಿಯಾದ ರೀತಿಯಲ್ಲಿ ತನಿಖೆ ನಡೆಸುತ್ತಾರೆ ಎಂದು ಭರವಸೆ ನೀಡಿದರು.

ಪ್ರಾಥಮಿಕ ತನಿಖೆಯ ಪ್ರಕಾರ, ಆರೋಪಿ ಬೆಳಗ್ಗೆ 11:30ಕ್ಕೆ ಶ್ರೀ ದರ್ಬಾರ್ ಸಾಹಿಬ್ ಕಾಂಪ್ಲೆಕ್ಸ್‌ಗೆ ಪ್ರವೇಶಿಸಿದ್ದು, ಸಂಜೆ 6 ರವರೆಗೆ ಅಲ್ಲೇ ಇದ್ದಾನೆ. ಆರೋಪಿ ಯಾವುದೋ ದುರುದ್ದೇಶ ಇಟ್ಟುಕೊಂಡು ಅಲ್ಲಿಗೆ ಬಂದಿದ್ದ ಎಂಬುದನ್ನು ಇದು ಸೂಚಿಸುತ್ತದೆ ಎಂದರು.

ಆರೋಪಿ ಎಲ್ಲಿಂದ ಬಂದಿದ್ದಾನೆ ಮತ್ತು ಆತ ಯಾರೊಂದಿಗಿದ್ದಾನೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಶ್ರೀ ದರ್ಬಾರ್ ಸಾಹಿಬ್‌ನ ಮಾರುಕಟ್ಟೆ ಮತ್ತು ಅಕ್ಕಪಕ್ಕದ ಪ್ರದೇಶಗಳ ಸಿಸಿಟಿವಿ ದೃಶ್ಯಗಳನ್ನು ಪರಿಶೀಲನೆ ಮಾಡಲಾಗುತ್ತಿದೆ.

ಆರೋಪಿಯ ಗುರುತು ಪತ್ತೆಯಾಗಿಲ್ಲ ಮತ್ತು ಆತನ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ ಎಂದು ರಾಂಧವಾ ಹೇಳಿದ್ದಾರೆ. ರಾಜ್ಯ ಸರ್ಕಾರವು ಎಸ್‌ಜಿಪಿಸಿಯೊಂದಿಗೆ ಜಂಟಿಯಾಗಿ ಕೆಲಸ ಮಾಡುತ್ತದೆ ಎಂದರು.

ಸೆಕ್ಷನ್ 295-ಎ ಪ್ರಕಾರ, ಯಾವುದೇ ಧರ್ಮದ ಹತ್ಯಾಕಾಂಡದ ಘಟನೆಗಳಲ್ಲಿ ತೊಡಗಿಸಿಕೊಂಡವರಿಗೆ 10 ವರ್ಷಗಳ ಜೈಲು ಶಿಕ್ಷೆ ವಿಧಿಸಲು ಅವಕಾಶವಿದೆ ಎಂದು ಅವರು ಹೇಳಿದರು. ರಾಜ್ಯ ಸರ್ಕಾರವು 295-ಎ ಕಲಂ ಅನುಮೋದನೆಗಾಗಿ ಕೇಂದ್ರಕ್ಕೆ ಪತ್ರವನ್ನು ಕಳುಹಿಸುತ್ತದೆ ಎಂದು ಅವರು ಹೇಳಿದರು.

ಇದಕ್ಕೂ ಮುನ್ನ ಅವರು ಸಿವಿಲ್ ಮತ್ತು ಪೊಲೀಸ್ ಅಧಿಕಾರಿಗಳೊಂದಿಗೆ, ಪೊಲೀಸ್ ಲೈನ್‌ನಲ್ಲಿ ಐಜಿ ಬಾರ್ಡರ್ ರೇಂಜ್ ಮೊಹ್ನಿಶ್ ಚಾವ್ಲಾ, ಪೊಲೀಸ್ ಆಯುಕ್ತ ಡಾ. ಸುಖಚೈನ್ ಸಿಂಗ್ ಗಿಲ್, ಉಪ ಆಯುಕ್ತ ಗುರುಪ್ರೀತ್ ಸಿಂಗ್ ಖೈರಾ, ಎಸ್‌ಎಸ್‌ಪಿ (ಗ್ರಾಮೀಣ) ರಾಕೇಶ್ ಕೌಶಲ್, ಎಸ್ ರಾಜಿಂದರ್ ಸಿಂಗ್ ಮೆಹ್ತಾ, ಎಸ್ ಹರ್ಜಪ್ ಸಿಂಗ್ ಅವರೊಂದಿಗೆ ಸಭೆ ನಡೆಸಿದರು.

ಗೋಲ್ಡನ್ ಟೆಂಪಲ್​ನಲ್ಲಿ ಏನಾಯ್ತು?
ಪೊಲೀಸರ ಪ್ರಕಾರ, ರೆಹ್ರಾಸ್ ಸಾಹಿಬ್ ಪಾಥ್(ಸಂಜೆಯ ಪ್ರಾರ್ಥನೆ) ಸಮಯದಲ್ಲಿ ಆ ವ್ಯಕ್ತಿ ಗೋಲ್ಡನ್ ಟೆಂಪಲ್ ಒಳಗೆ ರೇಲಿಂಗ್ ಮೇಲೆ ಜಿಗಿಯುತ್ತಿರುವುದು ಕಂಡುಬಂದಿದೆ. ನಂತರ ಆತ ಕೇವಲ ಗುರು ಗ್ರಂಥ ಸಾಹಿಬ್ ಮುಂದೆ ಇಟ್ಟಿದ್ದ ಖಡ್ಗವನ್ನು ಎತ್ತಿಕೊಂಡಿದ್ದಾನೆ. ಆ ವ್ಯಕ್ತಿ ಪವಿತ್ರ ಗ್ರಂಥವನ್ನು ಕತ್ತಿಯಿಂದ ಅಪವಿತ್ರಗೊಳಿಸಲು ಪ್ರಯತ್ನಿಸಿದ್ದಾನೆ. ಬಳಿಕ ಅಲ್ಲಿದ್ದವರು ಆತನಿಗೆ ಹಿಗ್ಗಾಮುಗ್ಗಾ ಥಳಿಸಿ ಕೊಂದಿದ್ದಾರೆ. ಮೃತ ವ್ಯಕ್ತಿಯ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಅಮೃತಸರ(ನಗರ) ಡಿಸಿಪಿ(ಕಾನೂನು ಮತ್ತು ಸುವ್ಯವಸ್ಥೆ) ಪರ್ಮಿಂದರ್ ಸಿಂಗ್ ಭಂಡಾಲ್ ಹೇಳಿದ್ದಾರೆ.

SCROLL FOR NEXT