ದೇಶ

ಅಮಿತ್‌ ಶಾ, ಸೋನಿಯಾ ಗಾಂಧಿ ಸೇರಿ ಹಲವು ಗಣ್ಯರ ಭದ್ರತೆಗೆ ಮಹಿಳಾ ಕಮಾಂಡೋಗಳ ನಿಯೋಜನೆ

Lingaraj Badiger

ನವದೆಹಲಿ: ಸುಶಿಕ್ಷಿತ ಕೇಂದ್ರೀಯ ಮೀಸಲು ಪೊಲೀಸ್ ಪಡೆ(ಸಿಆರ್‌ಪಿಎಫ್)ಯ ಮೊದಲ ಮಹಿಳಾ ಕಮಾಂಡೋಗಳ ತಂಡ ದೇಶದ ಹಲವು ಗಣ್ಯರಿಗೆ ಭದ್ರತೆಯನ್ನು ಒದಗಿಸಲಿದೆ. 

ಕೇಂದ್ರ ಗೃಹ ಸಚಿವ ಅಮಿತ್ ಶಾ, ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಹಾಗೂ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ದಂಪತಿ ಸೇರಿದಂತೆ ಹಲವು ವಿವಿಐಪಿಗಳ ಭದ್ರತಾ ಹೊಣೆಯನ್ನು ಸಿಆರ್‌ಪಿಎಫ್ ಮಹಿಳಾ ಕಮಾಂಡೋಗಳು ವಹಿಸಿಕೊಳ್ಳಲಿದ್ದಾರೆ.

ವಿವಿಐಪಿಗಳು ಮನೆಯಲ್ಲಿದ್ದಾಗ ಭದ್ರತೆ, ಕಣ್ಗಾವಲು ಜವಾಬ್ದಾರಿ ನೋಡಿಕೊಳ್ಳಲಿದ್ದಾರೆ. ಮುಂಬರುವ ಐದು ರಾಜ್ಯಗಳ ಚುನಾವಣೆಗೆ ಈ ನಾಯಕರು ಪ್ರವಾಸ ಕೈಗೊಂಡಾಗ ಮಹಿಳಾ ಕಮಾಂಡೋಗಳು ಭದ್ರತೆ ಕಲ್ಪಿಸಲಿದ್ದಾರೆ.

ಒಟ್ಟು 32 ಮಂದಿಯೊಂದಿಗೆ ಸಿದ್ದಗೊಂಡಿರುವ ಮಹಿಳಾ ಕಮಾಂಡೋ ಪಡೆ ಶೀಘ್ರದಲ್ಲಿಯೇ ಕರ್ತವ್ಯಕ್ಕೆ ನಿಯೋಜನೆಗೊಳ್ಳಲಿದೆ. ಶಸ್ತ್ರಾಸ್ತ್ರಗಳಿಲ್ಲದೆ ಶತ್ರುಗಳ ವಿರುದ್ಧ ಹೋರಾಡುವುದು, ಎಲ್ಲ ರೀತಿಯ ಶಸ್ತ್ರಗಳ ಬಳಸುವ ನೈಪುಣ್ಯತೆ, ಭದ್ರತಾ ಕುರಿತು ಹದ್ದಿನ ಕಣ್ಣಿರಿಸುವುದು, ವಿಐಪಿಗಳಿಗೆ ಎದುರಾಗುವ ಬೆದರಿಕೆಯನ್ನು ಪತ್ತೆ ಹಚ್ಚಿ ಭದ್ರತೆ ಒದಗಿಸುವುದು. ಹೀಗೆ 10 ವಾರಗಳ ಕಠಿಣ ತರಬೇತಿಯನ್ನು ಈ ತಂಡ ಪೂರೈಸಿದೆ.

ಮುಂದಿನ ವರ್ಷ ಜನವರಿಯಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಳ್ಳಲಿದೆ ಎಂದು ಮೂಲಗಳು ಬುಧವಾರ ತಿಳಿಸಿವೆ. ಈ ಹಿಂದೆ ದೆಹಲಿಯಲ್ಲಿ Z + ವರ್ಗದಲ್ಲಿದ್ದ ಅಮಿತ್ ಶಾ, ಡಾ. ಮನಮೋಹನ್ ಸಿಂಗ್ ದಂಪತಿ ಮತ್ತಿತರರ ರಕ್ಷಣಾ ಹೊಣೆಯನ್ನು ವಹಿಸಿಕೊಳ್ಳಲಿದೆ. ರಾಜ್ಯಗಳಲ್ಲಿ ಚುನಾವಣಾ ಪ್ರಚಾರದ ವೇಳೆ ವಿವಿಐಪಿಗಳು ತಂಗುವ ಮನೆಗಳನ್ನು ಪರಿಶೀಲಿಸುವ ಜವಾಬ್ದಾರಿಯಬ ಈ ಮಹಿಳಾ ಕಮಾಂಡೋಗಳ ಮೇಲಿದೆ.

SCROLL FOR NEXT