ದೇಶ

ಜ. 3ರಿಂದ 15-18 ವರ್ಷದ ಮಕ್ಕಳಿಗೆ ಕೋವಿಡ್ ಲಸಿಕೆ ನೀಡಿಕೆ ಆರಂಭ, ಮುಂಚೂಣಿ ಕಾರ್ಯಕರ್ತರಿಗೆ ಬೂಸ್ಟರ್ ಡೋಸ್- ಪ್ರಧಾನಿ ಮೋದಿ

Nagaraja AB

ನವದೆಹಲಿ: ದೇಶದಲ್ಲಿನ 15 ರಿಂದ 18 ವರ್ಷದ ಮಕ್ಕಳಿಗೆ ಕೋವಿಡ್ ಲಸಿಕೆ ನೀಡುವುದನ್ನು ಹೊಸ ವರ್ಷದಿಂದ ಆರಂಭಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಮಹತ್ವದ ಘೋಷಣೆ ಮಾಡಿದ್ದಾರೆ.

ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ,  ಜನವರಿ ಮೂರರಿಂದ 15 ರಿಂದ 18 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ನೀಡುವುದನ್ನು ಪ್ರಾರಂಭಿಸಲಾಗುವುದು, ಶಾಲಾ- ಕಾಲೇಜುಗಳಿಗೆ ತೆರಳಿಗೆ ಲಸಿಕೆ ನೀಡಲಾಗುವುದು ಎಂದು ತಿಳಿಸಿದರು.

 ಆರೋಗ್ಯ ಮತ್ತು ಮುಂಚೂಣಿ ಕಾರ್ಯಕರ್ತರಿಗೆ ಜನವರಿ 10 ರಿಂದ ಬೂಸ್ಟರ್ ಡೋಸ್ ನೀಡಲಾಗುವುದು, 60 ವರ್ಷ ಮೇಲ್ಪಟ್ಟವರು ಹಾಗೂ  ಕೋಮಾರ್ಬಿಡಿಟಿ ಇದ್ದವರಿಗೂ ವೈದ್ಯರ ಸಲಹೆ ಮೇರೆಗೆ ಪ್ರಿಕಾಷನ್ ಲಸಿಕೆ ಆರಂಭಿಸಲಾಗುವುದು ಎಂದು ಪ್ರಧಾನಿ ಹೇಳಿದರು.

ದೇಶದಲ್ಲಿ 141 ಕೋಟಿ ಡೋಸ್ ಲಸಿಕೆ ಹಂಚಲಾಗಿದೆ. 18 ಲಕ್ಷ ಐಸೋಲೇಷನ್ ಬೆಡ್, 5 ಲಕ್ಷ ಅಮ್ಲಜನಕ ಬೆಂಬಲ ಬೆಡ್, 1.4 ಲಕ್ಷ ಐಸಿಯು ಬೆಡ್ ಹೊಂದಿದ್ದೇವೆ. ಅರ್ಹ ಜನಸಂಖ್ಯೆಯ ಶೇಕಡಾ 90ಕ್ಕಿಂತಲೂ ಹೆಚ್ಚು ಮಂದಿಗೆ ಮೊದಲ ಡೋಸ್ ನೀಡಲಾಗಿದೆ ಎಂದು ತಿಳಿಸಿದರು.

ವಿಶ್ವದ ಅನೇಕ ರಾಷ್ಟ್ರಗಳಲ್ಲಿ ಕೋವಿಡ್-19 ರೂಪಾಂತರಿ ಓಮಿಕ್ರಾನ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ನಾನು ಎಲ್ಲರಿಗೂ ಮನವಿ ಮಾಡುತ್ತೇನೆ, ಭಯಪಡಬೇಡಿ ಆದರೆ ಜಾಗರೂಕರಾಗಿರಿ ಮತ್ತು ನಿಯಮಿತವಾಗಿ ಮಾಸ್ಕ್ ಬಳಸಿ ಮತ್ತು ಕೈಗಳನ್ನು ಸ್ಯಾನಿಟೈಜ್ ಮಾಡಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

SCROLL FOR NEXT