ದೇಶ

ಮುಖ್ಯ ಚುನಾವಣಾ ಆಯುಕ್ತ ಸುಶೀಲ್ ಚಂದ್ರರಿಂದ ಮೂರು ದಿನ ಉತ್ತರ ಪ್ರದೇಶ ಭೇಟಿ

Lingaraj Badiger

ನವದೆಹಲಿ: ಉತ್ತರ ಪ್ರದೇಶ ವಿಧಾನಸಭೆಯ ಮಹಾ ಚುನಾವಣೆ 2022ರಲ್ಲಿ ನಡೆಯಲಿದೆ. ಈ ಬಗ್ಗೆ ಪೂರ್ವ ಸಿದ್ಧತೆಗಳನ್ನು ಪರಿಶೀಲಿಸಲು ಚುನಾವಣಾ ತಂಡ ಉತ್ತರ ಪ್ರದೇಶ ಪ್ರವಾಸ ಕೈಗೊಳ್ಳಲಿದೆ. ಈ ತಂಡದಲ್ಲಿ ಮುಖ್ಯ ಚುನಾವಣಾ ಆಯುಕ್ತ ಸುಶೀಲ್ ಚಂದ್ರ ಸೇರಿದಂತೆ ಹಲವು ಮುಖ್ಯ ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ.

ಇಂದಿನಿಂದ ಪ್ರಾರಂಭವಾಗುವ ಮೂರು ದಿನಗಳ ಭೇಟಿಯಲ್ಲಿ ಹೊಸ ರೂಪಾಂತರಿ ಓಮೈಕ್ರಾನ್ ದೃಷ್ಟಿಯಿಂದ ಚುನಾವಣಾ ಸಿದ್ಧತೆಗಳನ್ನು ಪರಿಶೀಲನೆ ಮಾಡಲಾಗುತ್ತದೆ. ಕಳೆದ ಶುಕ್ರವಾರ ಮುಖ್ಯ ಚುನಾವಣಾ ಆಯುಕ್ತ ಸುಶೀಲ್ ಚಂದ್ರ ಉತ್ತರ ಪ್ರದೇಶದಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಲು ಮುಂದಿನ ವಾರ ಆ ರಾಜ್ಯಕ್ಕೆ ಭೇಟಿ ನೀಡುವುದಾಗಿ ತಿಳಿಸಿದ್ದರು.

ಈ ಮಹತ್ವದ ಪ್ರವಾಸದ ಬಳಿಕ, ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಚುನಾವಣೆ ನಡೆಸಬೇಕೋ ಬೇಡವೋ ಎಂಬ ಬಗ್ಗೆ ನಿರ್ಧಾರ ಹೊರ ಬೀಳುವ ಸಾಧ್ಯತೆ ಇದೆ.

ಚುನಾವಣಾ ಆಯೋಗದ ತಂಡ ಇಂದು ಲಖನೌ ತಲುಪಿದ ನಂತರ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಸಂವಾದ ನಡೆಸಲಿದೆ. ಬುಧವಾರ ಡಿಜಿಪಿಗಳು, ರಾಜ್ಯ ಗೃಹ ಇಲಾಖೆಯ ಅಧಿಕಾರಿಗಳು ಹಾಗೂ ಹಣಕಾಸು ಇಲಾಖೆಯ ಅಧಿಕಾರಿಗಳೊಂದಿಗೆ ಪರಾಮರ್ಶೆ ಪೂರ್ಣಗೊಳಿಸಲಿದೆ.

ಉತ್ತರ ಪ್ರದೇಶ ವಿಧಾನಸಭೆಯ 403 ಸ್ಥಾನಗಳಿದ್ದು, 2017ರಲ್ಲಿ ಚುನಾಯಿತಗೊಂಡ ಪ್ರಸಕ್ತ ವಿಧಾನಸಭೆಯ ಅವಧಿ 2022ರ ಮೇ 14ರಂದು ಕೊನೆಗೊಳ್ಳಲಿದೆ.

SCROLL FOR NEXT