ದೇಶ

ಅಕ್ರಮ ಹಣ ವರ್ಗಾವಣೆ ಪ್ರಕರಣ: ಅನಿಲ್ ದೇಶಮುಖ್ ವಿರುದ್ಧ ಪೂರಕ ಚಾರ್ಜ್ ಶೀಟ್ ಸಲ್ಲಿಸಿದ ಇಡಿ

Lingaraj Badiger

ಮುಂಬೈ: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶಮುಖ್ ಅವರ ವಿರುದ್ಧ ಜಾರಿ ನಿರ್ದೇಶನಾಲಯ(ಇಡಿ) ಬುಧವಾರ ಪೂರಕ ಚಾರ್ಜ್ ಶೀಟ್ ಸಲ್ಲಿಸಿದೆ.

ತನಿಖಾ ಸಂಸ್ಥೆಯು ಇಂದು ಮಾಜಿ ಸಚಿವರ ವಿರುದ್ಧ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ)ಗೆ ಸಂಬಂಧಿಸಿದ ವಿಶೇಷ ಕೋರ್ಟ್ ಗೆ 7,000 ಪುಟಗಳ ಚಾರ್ಜ್ ಶೀಟ್ ಅನ್ನು ಸಲ್ಲಿಸಿದೆ. ಇದರಲ್ಲಿ ದೇಶಮುಖ್ ಅವರ ಪುತ್ರರನ್ನು ಆರೋಪಿಗಳೆಂದು ಹೆಸರಿಸಲಾಗಿದೆ.

ಜಾರಿ ನಿರ್ದೇಶನಾಲಯ ಇದಕ್ಕು ಮುನ್ನ ದೇಶಮುಖ್ ಅವರ ಖಾಸಗಿ ಕಾರ್ಯದರ್ಶಿ(ಹೆಚ್ಚುವರಿ ಕಲೆಕ್ಟರ್ ಶ್ರೇಣಿಯ ಅಧಿಕಾರಿ) ಸಂಜೀವ್ ಪಲಾಂಡೆ ಮತ್ತು ಆಪ್ತ ಸಹಾಯಕ ಕುಂದನ್ ಶಿಂಧೆ ಸೇರಿದಂತೆ 14 ಆರೋಪಿಗಳ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿತ್ತು.

ಪ್ರಕರಣಕ್ಕೆ ಸಂಬಂಧಿಸಿದಂತೆ ಈ ವರ್ಷ ನವೆಂಬರ್ 1 ರಂದು ದೇಶಮುಖ್ ಅವರನ್ನು ಇಡಿ ಬಂಧಿಸಿದ್ದು, ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿದ್ದಾರೆ.

ದೇಶಮುಖ್ ಅವರು ರಾಜ್ಯದ ಗೃಹ ಸಚಿವರಾಗಿದ್ದಾಗ ತಮ್ಮ ಅಧಿಕೃತ ಸ್ಥಾನವನ್ನು ದುರುಪಯೋಗಪಡಿಸಿಕೊಂಡು, ವಜಾಗೊಂಡ ಪೊಲೀಸ್ ಅಧಿಕಾರಿ ಸಚಿನ್ ವಾಜೆ ಮೂಲಕ ಮುಂಬೈನ ವಿವಿಧ ಬಾರ್ ಮತ್ತು ರೆಸ್ಟೋರೆಂಟ್‌ಗಳಿಂದ 4.70 ಕೋಟಿ ರೂಪಾಯಿ ಸಂಗ್ರಹಿಸಿದ್ದಾರೆ ಎಂದು ಇಡಿ ಆರೋಪಿಸಿದೆ.

SCROLL FOR NEXT