ದೇಶ

ಹೆಚ್ಚು ಪಿಎಂ 2.5 ಮಟ್ಟ ಇರುವ ಪ್ರದೇಶದಲ್ಲಿರುವವರು ಕೋವಿಡ್-19 ಸೋಂಕಿಗೆ ತುತ್ತಾಗುವ ಅಪಾಯ ಹೆಚ್ಚು!

Srinivas Rao BV

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ಹಾಗೂ ಮಹಾರಾಷ್ಟ್ರ, ಉತ್ತರ ಪ್ರದೇಶ, ಮಧ್ಯಪ್ರದೇಶ ಹಾಗೂ ತಮಿಳುನಾಡುಗಳಂತಹ ರಾಜ್ಯಗಳಲ್ಲಿರುವವರಿಗೆ ಕೋವಿಡ್-19 ಸೋಂಕು ತಗುಲುವ ಅಪಾಯ ಹೆಚ್ಚಿದೆ ಎಂದು ಅಧ್ಯಯನ ವರದಿ ಎಚ್ಚರಿಸಿದೆ. 

ಈ ಪ್ರದೇಶಗಳಲ್ಲಿ ಪಿಎಂ 2.5 ಹೆಚ್ಚಿನ ಸಾಂದ್ರತೆ ಇರುವ ಕಾರಣದಿಂದಾಗಿ ಕೋವಿಡ್-19 ಸೋಂಕು ತಗುಲುವ ಅಪಾಯ ಹೆಚ್ಚಿದೆ ಎಂದು ಪ್ಯಾನ್ ಇಂಡಿಯಾ ಅಧ್ಯಯನ ವರದಿ ತಿಳಿಸಿದೆ. 

ದೆಹಲಿ, ಮುಂಬೈ, ಚೆನ್ನೈ, ಬೆಂಗಳೂರು, ಕೋಲ್ಕತ್ತಾ, ಪುಣೆ, ಅಹ್ಮದಾಬಾದ್, ವಾರಾಣಸಿ, ಲಖನೌ, ಸೂರತ್ ಸೇರಿದಂತೆ 16 ಪ್ರಮುಖ ನಗರಗಳಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚಿದ್ದು, ಪಳೆಯುಳಿಕೆ ಇಂಧನ ಆಧಾರಿತ ಮಾನವಜನ್ಯ ಚಟುವಟಿಕೆಗಳಿಂದಾಗಿ ಪಿಎಂ 2.5 ಎಮಿಷನ್ ಪ್ರಮಾಣವೂ ಹೆಚ್ಚಾಗಿದೆ ಎಂದು ಪ್ಯಾನ್ ಇಂಡಿಯಾ ಅಧ್ಯಯನ ವರದಿ ತಿಳಿಸಿದೆ. 

ದೇಹದೊಳಗೆ ಪ್ರವೇಶಿಸುವ ಹಾಗೂ ಶ್ವಾಸಕೋಶದಲ್ಲಿ ಉರಿಯೂತ ಉಂಟುಮಾಡಬಲ್ಲ ಸೂಕ್ಷ್ಮ ಕಣಗಳಿಗೆ ಪಿಎಂ2.5 ಎಂದು ಹೇಳಲಾಗುತ್ತದೆ. ಇದರಿಂದಾಗಿ ಹೃದಯ, ಶ್ವಾಸಕೋಶ ಸಂಬಂಧಿತ ಸಮಸ್ಯೆಗಳು ಹೆಚ್ಚಾಗಲಿದ್ದು ರೋಗ ನಿರೋಧಕ ವ್ಯವಸ್ಥೆ ಕುಗ್ಗಲಿದೆ. 

ದೇಶಾದ್ಯಂತ 721 ಜಿಲ್ಲೆಗಳಲ್ಲಿ ನಡೆದ ಅಧ್ಯಯನದಲ್ಲಿ ಪಿಎಂ2.5 ಎಮಿಷನ್ ಲೋಡ್ ಗೂ ಕೊರೋನಾ ಸೋಂಕು, ಸಾವು ಪ್ರಕರಣಗಳು ಹೆಚ್ಚುವುದಕ್ಕೂ ದೃಢವಾದ ನಂಟಿದೆ ಎಂದು ಅಧ್ಯಯನ ವರದಿಯ ಲೇಖಕ ಹಾಗೂ ವಾಯು ಗುಣಮಟ್ಟ ಮತ್ತು ಹವಾಮಾನ ಮುನ್ಸೂಚನೆ ಮತ್ತು ಸಂಶೋಧನೆಯ ವ್ಯವಸ್ಥೆಯ ನಿರ್ದೇಶಕ ಗುಫ್ರಾನ್ ಬೇಗ್ ಹೇಳಿದ್ದಾರೆ. 

ಭುವನೇಶ್ವರದ ಉತ್ಕಲ್ ವಿವಿ, ಪುಣೆಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟ್ರಾಪಿಕಲ್ ಮೆಟಿಯರೋಲಜಿ, ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ರೂರ್ಕೆಲಾ ಹಾಗೂ ಭುವನೇಶ್ವರ ಐಐಟಿಗಳು ಎಮಿಷನ್, ಕೋವಿಡ್-19 ಸೋಂಕು ಪ್ರಕರಣ, ಕೋವಿಡ್-19 ನಿಂದ ಉಂಟಾದ ಸಾವಿಗೆ ಸಂಬಂಧಿಸಿದ ದತ್ತಾಂಶಗಳನ್ನು ಈ ಜಿಲ್ಲೆಗಳಲ್ಲಿ ಕಳೆದ ವರ್ಷ ನವೆಂಬರ್ 5 ವರೆಗೂ ಅಧ್ಯಯನ ಮಾಡಿವೆ.

ದೇಶದಲ್ಲಿ ಮಾಲಿನ್ಯ ಹಾಟ್ ಸ್ಪಾಟ್ ಆಗಿರುವ ಪ್ರದೇಶಗಳಲ್ಲಿ ಹೆಚ್ಚಿನ ಕೋವಿಡ್-19 ಪ್ರಕರಣಗಳು ಕಂಡುಬರುತ್ತಿರುವುದು ಅಧ್ಯಯನ ವರದಿಯಿಂದ ತಿಳಿದುಬಂದಿದೆ. 

SCROLL FOR NEXT