ದೇಶ

ಟಿವಿ ಒದಗಿಸುವಂತೆ ತಿಹಾರ್ ಜೈಲು ಅಧಿಕಾರಿಗಳಿಗೆ ಸುಶೀಲ್ ಕುಮಾರ್ ಮನವಿ

Nagaraja AB

ನವದೆಹಲಿ: ಕುಸ್ತಿ ಪಂದ್ಯಗಳ ಅಪ್ ಡೇಟ್ ಗಾಗಿ ಟಿವಿ ಒದಗಿಸುವಂತೆ ತಿಹಾರ್ ಜೈಲಿನಲ್ಲಿರುವ ಎರಡು ಬಾರಿ ಒಲಿಂಪಿಕ್ ಪದಕ ವಿಜೇತ ಸುಶೀಲ್ ಕುಮಾರ್ ಕೇಳಿರುವುದಾಗಿ ಜೈಲಿನ ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ. 

ವಿವಾದವೊಂದಕ್ಕೆ ಸಂಬಂಧಿಸಿದಂತೆ ಮೇ 4 ಮತ್ತು 5ರ ರಾತ್ರಿ ಕುಸ್ತಿಪಟು ಸಾಗರ್ ದಾಂಕರ್ ಮತ್ತು ಆತನ ಇಬ್ಬರು ಸ್ನೇಹಿತರಾದ ಸೊನು ಮತ್ತು ಅಮಿತ್ ಕುಮಾರ್ ಅವರ ಬಗ್ಗೆ ಹಲ್ಲೆ ನಡೆಸಿದ ಆರೋಪದ ಮೇಲೆ ಮೇ 23 ರಂದು ದೆಹಲಿಯ ಮುಂದ್ಕಾ ಪ್ರದೇಶದಲ್ಲಿ ಸುಶೀಲ್ ಕುಮಾರ್ ಹಾಗೂ ಸಹ ಆರೋಪಿ ಅಜಯ್ ಕುಮಾರ್ ಅವರನ್ನು ಬಂಧಿಸಲಾಗಿತ್ತು. ತದನಂತರ ಗಾಯಾಳು ದಾಂಕರ್ ಮೃತಪಟ್ಟಿದ್ದ.

ತನ್ನ ವಕೀಲರ ಮೂಲಕ ಟಿವಿ ಒದಗಿಸುವಂತೆ ಸುಶೀಲ್ ಕುಮಾರ್ ಕೇಳಿರುವುದಾಗಿ ಜೈಲಿನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕುಸ್ತಿ ಪಂದ್ಯಗಳ ಆಪ್ ಡೇಟ್ ಗಾಗಿ ಟಿವಿ ಒದಗಿಸುವಂತೆ ಸುಶೀಲ್ ಕುಮಾರ್ ಮನವಿ ಮಾಡಿರುವುದಾಗಿ ಅವರು ಹೇಳಿದ್ದಾರೆ.  ಈ ಹಿಂದೆ ಜುಲೈ 9ರವರೆಗೂ ಸುಶೀಲ್ ಕುಮಾರ್ ನ್ಯಾಯಾಂಗ ಬಂಧನ ಅವಧಿಯನ್ನು ದೆಹಲಿಯ ನ್ಯಾಯಾಲಯವೊಂದು ವಿಸ್ತರಿಸಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೂ 12 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಸುಶೀಲ್ ಕುಮಾರ್ ಹತ್ಯೆಯ ಮಾಸ್ಟರ್ ಮೈಂಡ್ ಎಂದು ಪೊಲೀಸರು ಹೇಳಿದ್ದಾರೆ.

SCROLL FOR NEXT