ದೇಶ

ವಿಮಾನಯಾನ ಸಚಿವಾಲಯದ 2 ಸಲಹೆಗಾರರು, ಡಿಜಿಸಿಎ 2 ಅಧಿಕಾರಿಗಳು ಕೊರೋನಾಗೆ ಬಲಿ

Manjula VN

ನವದೆಹಲಿ: ನಾಗರಿಕ ವಿಮಾನಯಾನ ಸಚಿವಾಲಯದ ಇಬ್ಬರು ಸಲಹೆಗಾರರು ಹಾಗೂ ವಾಯುಯಾನ ನಿಯಂತ್ರಕ ಡಿಜಿಸಿಎಯ ಇಬ್ಬರು ಅಧಿಕಾರಿಗಳು ಮಹಾಮಾರಿ ಕೊರೋನಾ ಸೋಂಕಿನಿಂದ ಮೃತಪಟ್ಟಿದ್ದಾರೆ ಎಂದು ಸರ್ಕಾರಿ ಅಧಿಕಾರಿಗಳು ಭಾನುವಾರ ಮಾಹಿತಿ ನೀಡಿದ್ದಾರೆ.

ಸರ್ಕಾರಿ ಸೇವೆಯಿಂದ ನಿವೃತ್ತರಾಗಿ ಸದ್ಯ ಸಚಿವಾಲಯದಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಇಬ್ಬರು ಸಲಹೆಗಾರರು 2020ರ ಕೋವಿಡ್-19 ಮೊದಲನೇ ಅಲೆಯ ಸಂದರ್ಭದಲ್ಲಿ ಸಾವಿಗೀಡಾಗಿದ್ದರು. ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್ (ಡಿಜಿಸಿಎ)ನ ನಿರ್ದೇಶಕ ಮತ್ತು ಸಹಾಯಕ ನಿರ್ದೇಶಕರಿಬ್ಬರು 2021ರ ಕೋವಿಡ್-19 ಎರಡನೇ ಅಲೆಯ ವೇಳೆ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ.

ಈ ವರ್ಷದ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಕೊರೋನಾ ವೈರಸ್ ಸೋಂಕಿನ 2ನೇ ಅಲೆಯು ಭಾರತಕ್ಕೆ ತೀವ್ರ ಹಾನಿಯನ್ನುಂಟುಮಾಡಿದೆ. ಈ ವರ್ಷದ ಜನವರಿ ಮತ್ತು ಮೇ ತಿಂಗಳಿನಲ್ಲಿ ನಾಗರಿಕ ವಿಮಾನಯಾನ ಸಚಿವಾಲಯದ ಒಟ್ಟು 44 ಉದ್ಯೋಗಿಗಳು ಕೋವಿಡ್ ಸೋಂಕಿತರಾಗಿದ್ದರು. 

2021ಕ್ಕೆ ಹೋಲಿಸಿದರೆ 2020ರಲ್ಲಿ ಸಚಿವಾಲಯದ ಕೇವಲ 26 ನೌಕರರು ಮಾತ್ರ ಕೋವಿಡ್-19 ಪಾಸಿಟಿವ್ ಆಗಿದ್ದರು. ಸೋಂಕು ತಗುಲಿದ್ದ ಎಲ್ಲ ನೌಕರರ ವೈದ್ಯಕೀಯ ವೆಚ್ಚವನ್ನು ಕೇಂದ್ರ ಸರ್ಕಾರದ ಆರೋಗ್ಯ ಯೋಜನೆ (ಸಿಜಿಎಚ್‌ಎಸ್) ಮತ್ತು ಕೇಂದ್ರ ಸೇವಾ (ವೈದ್ಯಕೀಯ ಹಾಜರಾತಿ) ನಿಯಮಗಳ ಪ್ರಕಾರ ಮರುಪಾವತಿಸಲಾಗಿದೆ ಎಂದು ಹೇಳಿದ್ದಾರೆ. 

ಇನ್ನು ಕೇಂದ್ರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಮಾಹಿತಿ ಪ್ರಕಾರ, ಭಾನುವಾರ ದೇಶದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ 3,08,37,222ಕ್ಕೆ ಏರಿಕೆಯಾಗಿದ್ದು, ಸಕ್ರಿಯ ಪ್ರಕರಣಗಳು 4,54,118ಕ್ಕೆ ಕುಸಿದಿದೆ ಎಂದು ತಿಳಿದುಬಂದಿದೆ. 

SCROLL FOR NEXT