ದೇಶ

ಕೋವಿಡ್-19 ಮೂರನೇ ಅಲೆ: ಐಎಂಎ ಎಚ್ಚರಿಕೆ ಬೆನ್ನಲ್ಲೇ ಕನ್ವಾರ್ ಯಾತ್ರೆ ರದ್ದುಗೊಳಿಸಿದ ಉತ್ತರಾಖಂಡ ಸರ್ಕಾರ

Srinivasamurthy VN

ಡೆಹ್ರಾಡೂನ್: ದೇಶದಲ್ಲಿ ಕೋವಿಡ್-19 ಮೂರನೇ ಅಲೆ ನಿಶ್ಚಿತ.. ಧಾರ್ಮಿಕ ಯಾತ್ರೆಗಳಿಗೆ ಈಗಲೇ ಆತುರ ಬೇಡ ಎಂಬ ಭಾರತೀಯ ವೈದ್ಯಕೀಯ ಸಂಘದ ಎಚ್ಚರಿಕೆ ಬೆನ್ನಲ್ಲೇ ಇತ್ತ ಉತ್ತರಾಖಂಡ ಸರ್ಕಾರ ಧಾರ್ಮಿಕ ಕನ್ವಾರ್ ಯಾತ್ರೆಯನ್ನು ರದ್ದುಗೊಳಿಸಿದೆ.

ಈ ಕುರಿತಂತೆ ಎಎನ್ಐ ಸುದ್ದಿಸಂಸ್ಥೆ ವರದಿ ಮಾಡಿದ್ದು, ರಾಜ್ಯದಲ್ಲಿ ಕೋವಿಡ್ ಸೋಂಕು ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಉತ್ತರಾಖಂಡ ಸರ್ಕಾರ ಕನ್ವಾರ್ ಯಾತ್ರೆಯನ್ನು ರದ್ದುಗೊಳಿಸಿದೆ. 

ಕನ್ವಾರ್ ಯಾತ್ರೆಯು ವಾರ್ಷಿಕ ಶಿವ ಭಕ್ತರ ಹಬ್ಬವಾಗಿದ್ದು, ಹತ್ತಿರದ ಶಿವ ದೇವಾಲಯಗಳಲ್ಲಿ ಗಂಗಾ ಜಲವನ್ನು ಸಂಗ್ರಹಿಸುವ ಸಲುವಾಗಿ ಸಾಮೂಹಿಕವಾಗಿ ಬರಿಗಾಲಿನಿಂದ ಮೆರವಣಿಗೆ ನಡೆಸುತ್ತಾರೆ. ಈ ಮೆರವಣಿಗೆಯಲ್ಲಿ ಲಕ್ಷಾಂತರ ಭಕ್ತರು ಪಾಲ್ಗೊಳ್ಳುತ್ತಾರೆ. ಇದೇ ಕಾರಣಕ್ಕೆ ಉತ್ತರಾಖಂಡ ಸರ್ಕಾರ ಈ ಧಾರ್ಮಿಕ  ಯಾತ್ರೆ ರದ್ದುಗೊಳಿಸಿದೆ.

ಉತ್ತರಾಖಂಡ ಸಿಎಂಗೆ ಪತ್ರ ಬರೆದ ಐಎಂಎ
ಇನ್ನು ಧಾರ್ಮಿಕ ಯಾತ್ರೆಗಳ ವಿಚಾರವಾಗಿ ಈ ಹಿಂದೆ ಭಾರತೀಯ ವೈದ್ಯಕೀಯ ಸಂಘ ಪತ್ರ ಬರೆದಿತ್ತು. ರಾಜ್ಯದಲ್ಲಿ ಸೋಂಕು ಪ್ರಕರಣಗಳು ಗಣನೀಯವಾಗಿ ಏರಿಕೆಯಾಗುತ್ತಿದ್ದು, ಈ ಹಂತದಲ್ಲಿ ಧಾರ್ಮಿಕ ಯಾತ್ರಗಳ ಹೆಸರಿನಲ್ಲಿ ಜನ ಸಾಮೂಹಿಕವಾಗಿ ಸೇರುವುದು ಅಪಾಯ. ಕನ್ವಾರ್ ಯಾತ್ರೆಗೆ ಭಕ್ತರನ್ನು  ಹೊರಗಿನಿಂದ ರಾಜ್ಯಕ್ಕೆ ಪ್ರವೇಶಿಸಲು ಅನುಮತಿಸಬಾರದು. ಸಂಭಾವ್ಯ ಕೋವಿಡ್ ಮೂರನೇ ಅಲೆಯಿಂದ ರಾಜ್ಯವನ್ನು ಸುರಕ್ಷಿತವಾಗಿರಿಸಿಕೊಳ್ಳಬೇಕು. ಹೀಗಾಗಿ ಸೋಂಕು ಪ್ರಸರಣ ಗಮನದಲ್ಲಿಟ್ಟುಕೊಂಡು ಧಾರ್ಮಿಕ ಯಾತ್ರೆ ಕುರಿತು ಸೂಕ್ತ ನಿರ್ಧಾರ ಕೈಗೊಳ್ಳುವಂತೆ ಐಎಂಎ ಉತ್ತರಾಖಂಡ ರಾಜ್ಯ ಕಾರ್ಯದರ್ಶಿ  ಡಾ.ಅಜಯ್ ಖನ್ನಾ ಅವರು  ಸಲಹೆ ನೀಡಿದ್ದರು. 

ಇದರ ಬೆನ್ನಲ್ಲೇ ಉತ್ತರಾಖಂಡ ಸರ್ಕಾರ ಕನ್ವಾರ್ ಯಾತ್ರೆಯನ್ನು ರದ್ದುಗೊಳಿಸಿದೆ. ಕಳೆದ ವರ್ಷವೂ ಕೂಡ ಇದೇ ಕೋವಿಡ್ ಮಹಾಮಾರಿಯಿಂದಾಗಿ ಐತಿಹಾಸಿಕ ಕನ್ವಾರ್ ಯಾತ್ರೆ ರದ್ದುಗೊಂಡಿತ್ತು.
 

SCROLL FOR NEXT