ದೇಶ

ದೆಹಲಿ ಗಲಭೆ: ಆರೋಪಿ ತಸ್ಲೀಮ್ ಅಹ್ಮದ್'ಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಕೋರ್ಟ್ ಸಮ್ಮತಿ

Vishwanath S

ನವದೆಹಲಿ: ದೆಹಲಿ ಗಲಭೆ ಪಿತೂರಿ ನೀಡಿದ ಪ್ರಕರಣದಲ್ಲಿ ಕಠಿಣ ಕಾನೂನುಬಾಹಿರ ಚಟುವಟಿಕೆ(ತಡೆ) ಕಾಯ್ದೆಯಡಿ ಬಂಧಿಸಲ್ಪಟ್ಟ ತಸ್ಲೀಮ್ ಅಹ್ಮದ್‌ಗೆ ಸರ್ಕಾರಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ನಡೆಸಲು ದೆಹಲಿ ನ್ಯಾಯಾಲಯ ಅವಕಾಶ ನೀಡಿದೆ.

ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಅಮಿತಾಬ್ ರಾವತ್ ಅವರು ತಿಹಾರ್ ಜೈಲು ಅಧೀಕ್ಷಕರಿಗೆ ನಿರ್ದೇಶನ ನೀಡಿದ್ದು, ಸಫ್ದರ್ಜಂಗ್ ಆಸ್ಪತ್ರೆ ಅಥವಾ ದೆಹಲಿಯ ಎಲ್.ಎನ್.ಜೆ.ಪಿ ಆಸ್ಪತ್ರೆಯಂತಹ ಉತ್ತಮ ವೈದ್ಯಕೀಯ ಸೌಲಭ್ಯಗಳನ್ನು ಹೊಂದಿರುವ ಯಾವುದೇ ಸರ್ಕಾರಿ ಆಸ್ಪತ್ರೆಯಲ್ಲಿ ಅಹ್ಮದ್ ಚಿಕಿತ್ಸೆ ಕೊಡಿಸಲು ನಿರ್ದೇಶಿಸಿದ್ದಾರೆ.

ವಿಚಾರಣೆಯ ವೇಳೆ ಆರೋಪಿ ಪರ ವಕೀಲ ಮೆಹಮೂದ್ ಪ್ರಚಾ, ತನ್ನ ಕಕ್ಷಿದಾರ ಜೈಲಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೂ ಗುಣಮುಖರಾಗಿಲ್ಲ. ಅಲ್ಲದೆ ಗಂಭೀರ ಸೋಂಕಿಗೆ ತುತ್ತಾಗುವ ಅಪಾಯವಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು.

ದೀನ್ ದಯಾಳ್ ಉಪಾಧ್ಯಾಯ(ಡಿಡಿಯು) ಆಸ್ಪತ್ರೆಯನ್ನು ಹೊರತುಪಡಿಸಿ ಯಾವುದೇ ಸರ್ಕಾರಿ ಆಸ್ಪತ್ರೆಯಲ್ಲಿ ಆರೋಪಿಗಳಿಗೆ ಶಸ್ತ್ರಚಿಕಿತ್ಸೆ ನಡೆಸಲು ಅವಕಾಶ ನೀಡುವಂತೆ ಅವರು ನ್ಯಾಯಾಲಯಕ್ಕೆ ಮನವಿ ಮಾಡಿದರು. ಆರೋಪಿ ಹೈಡ್ರೋಸೆಲ್ ನಿಂದ ಬಳಲುತ್ತಿದ್ದು, ಇದು ಸ್ಕ್ರೋಟಮ್‌ನಲ್ಲಿ ಒಂದು ರೀತಿಯ ಊತದ ಖಾಯಿಲೆಯಾಗಿದೆ ಎಂದು ವಕೀಲರು ತಿಳಿಸಿದ್ದಾರೆ.

ವಿಶೇಷ ಸಾರ್ವಜನಿಕ ಅಭಿಯೋಜಕ ಅಮಿತ್ ಪ್ರಸಾದ್ ಅವರು ಅಹ್ಮದ್ ವಿರುದ್ಧದ ಆರೋಪಗಳು ಸ್ವಭಾವತಃ ಗಂಭೀರವಾಗಿದ್ದು, ಅವರಿಗೆ ಜೈಲಿನಲ್ಲಿಯೇ ಅಗತ್ಯ ವೈದ್ಯಕೀಯ ಚಿಕಿತ್ಸೆ ನೀಡಬಹುದು ಎಂದು ವಾದಿಸಿದ್ದರು.

ಅಹ್ಮದ್ ಮತ್ತು ಇತರರ ವಿರುದ್ಧ ಭಯೋತ್ಪಾದನಾ-ವಿರೋಧಿ ಕಾನೂನಿನಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಫೆಬ್ರವರಿ 2020ರ ಹಿಂಸಾಚಾರದ 'ಮಾಸ್ಟರ್ ಮೈಂಡ್ಸ್' ಎಂದು ಆರೋಪಿಸಲಾಗಿದೆ. ಈ ಗಲಭೆಯಲ್ಲಿ 53 ಜನರು ಮೃತಪಟ್ಟಿದ್ದು 700ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.

ಇನ್ನು ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿನಿ ಆಸಿಫ್ ಇಕ್ಬಾಲ್ ತನ್ಹಾ, ಜೆಎನ್‌ಯು ವಿದ್ಯಾರ್ಥಿಗಳಾದ ನತಾಶಾ ನರ್ವಾಲ್ ಮತ್ತು ದೇವಂಗನ ಕಲಿತಾ, ಮಾಜಿ ವಿದ್ಯಾರ್ಥಿ ಮುಖಂಡ ಉಮರ್ ಖಾಲಿದ್, ಜಾಮಿಯಾ ಸಮನ್ವಯ ಸಮಿತಿ ಸದಸ್ಯರು ಸಫೂರ ಜಾರ್ಗರ್, ಮಾಜಿ ಎಎಪಿ ಕೌನ್ಸಿಲರ್ ತಾಹಿರ್ ಹುಸೇನ್ ಮತ್ತು ಇತರರ ವಿರುದ್ಧವೂ ಕಠಿಣ ಕಾನೂನಿನಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

SCROLL FOR NEXT