ದೇಶ

ಬಂಗಾಳ ಚುನಾವಣಾ ಫಲಿತಾಂಶ ಪ್ರಶ್ನಿಸಿ ದೀದಿ ಸಲ್ಲಿಸಿರುವ ಅರ್ಜಿ ವರ್ಗಾವಣೆ ಕೋರಿ 'ಸುಪ್ರೀಂ' ಮೆಟ್ಟಿಲೇರಿದ ಸುವೇಂದು ಅಧಿಕಾರಿ

Srinivasamurthy VN

ಕೋಲ್ಕತಾ: ನಂದಿಗ್ರಾಮ ವಿಧಾನಸಭಾ ಕ್ಷೇತ್ರದ ಚುನಾವಣೆಯ ಫಲಿತಾಂಶವನ್ನು ಪ್ರಶ್ನಿಸಿ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರು ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ರಾಜ್ಯಕ್ಕೆ ವರ್ಗಾವಣೆ ಮಾಡುವಂತೆ ಕೋರಿ ಬಿಜೆಪಿ ಶಾಸಕ ಹಾಗೂ ಪಶ್ಚಿಮ ಬಂಗಾಳದ ಪ್ರತಿಪಕ್ಷದ ನಾಯಕ ಸುವೇಂದು ಅಧಿಕಾರಿ ಬುಧವಾರ ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಿದ್ದಾರೆ.

ನಂದಿಗ್ರಾಮ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ತಮ್ಮ ಗೆಲುವನ್ನು ಪ್ರಶ್ನಿಸಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಕಲ್ಕತ್ತಾ ಹೈಕೋರ್ಟ್ ಗೆ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಬೇರೆ ರಾಜ್ಯದಲ್ಲಿ ನಡೆಸುವಂತೆ ಸುವೇಂದು ಅಧಿಕಾರಿ ಬುಧವಾರ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಈ ಹಿಂದೆ  ಕೋಲ್ಕತ್ತಾ ಹೈಕೋರ್ಟ್ ಮಮತಾ ಬ್ಯಾನರ್ಜಿಯವರ ಅರ್ಜಿಯನ್ನು ವಿಚಾರಣೆಗೆ ಸ್ವೀಕರಿಸಿ ನಂದಿಗ್ರಾಮ ಶಾಸಕ ಸುವೇಂದು ಅಧಿಕಾರಿಗೆ ಮತ್ತು ಸಂಬಂಧಪಟ್ಟ ಇತರರಿಗೆ ನೋಟಿಸ್ ಜಾರಿ ಮಾಡಿದ ಬೆನ್ನಲ್ಲೇ ಸುವೇಂದು ಅಧಿಕಾರಿ ಸುಪ್ರೀಂ ಕೋರ್ಟ್ ಮೊರೆ ಹೋಗಿರುವುದು ಹಲವರ ಹುಬ್ಬೇರಿಸಿದೆ.

ಅಂತೆಯೇ ನಂದಿಗ್ರಾಮದಲ್ಲಿ ನಡೆದ ಚುನಾವಣೆಗೆ ಸಂಬಂಧಿಸಿದ ಎಲ್ಲಾ ದಾಖಲೆಗಳು ಹಾಗೂ  ಸಾಧನಗಳನ್ನು ಸಂರಕ್ಷಿಸುವಂತೆ ನ್ಯಾಯಮೂರ್ತಿ ಶಂಪಾ ಸರ್ಕಾರ್ ಅವರು ಚುನಾವಣಾ ಆಯೋಗಕ್ಕೆ ಇಂದು ನಿರ್ದೇಶನ ನೀಡಿದರು. 

ಈ ಹಿಂದೆ ನಂದಿಗ್ರಾಮದಲ್ಲಿ ಸುವೇಂದು ಅಧಿಕಾರಿ 1,956 ಮತಗಳ ಅಂತರದಿಂದ ಮಮತಾ ಬ್ಯಾನರ್ಜಿಯವರನ್ನು ಸೋಲಿಸಿದ್ದರು. ಇದರ ಬೆನ್ನಲ್ಲೇ ಫಲಿತಾಂಶವನ್ನು ಮರು ಮೌಲ್ಯಮಾಪನ ಮಾಡುವಂತೆ ಕೋರಿ ಮೇ 21 ರಂದು ಮಮತಾ ಅವರು ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಇಂದು ಅರ್ಜಿಯನ್ನು ಆಲಿಸಿದ  ನ್ಯಾಯಾಲಯವು ಮುಂದಿನ ವಿಚಾರಣೆಯನ್ನು ಆಗಸ್ಟ್ 12ಕ್ಕೆ ಮುಂದೂಡಿದೆ.

SCROLL FOR NEXT