ದೇಶ

ಪ್ರಯಾಣಿಕರಿಗೆ ಆರ್ ಟಿ- ಪಿಸಿಆರ್ ವರದಿಯಿಂದ ವಿನಾಯಿತಿ ನೀಡಿದ ಮಹಾರಾಷ್ಟ್ರ ಸರ್ಕಾರ

Nagaraja AB

ಮುಂಬೈ:  ಕೋವಿಡ್ -19 ಲಸಿಕೆಯ ಎರಡು ಡೋಸ್ ಪಡೆದಂತಹ ಜನರು ರಾಜ್ಯಕ್ಕೆ ಭೇಟಿ ನೀಡಲು ನೆಗೆಟಿವ್ ಆರ್ ಟಿ- ಪಿಸಿಆರ್ ಪರೀಕ್ಷಾ ವರದಿಯಿಂದ ವಿನಾಯಿತಿಯನ್ನು ಮಹಾರಾಷ್ಟ್ರ ಸರ್ಕಾರ ನೀಡಿದೆ. ಆದಾಗ್ಯೂ, ರಾಜ್ಯಕ್ಕೆ ಬರುವ ಮುನ್ನ ಎರಡನೇ ಡೋಸ್ ಪಡೆದು 15 ದಿನಗಳ ಅಂತರವಿರಬೇಕು.

ಗುರುವಾರ ತಡರಾತ್ರಿ ಮಹಾರಾಷ್ಟ್ರದ ಮುಖ್ಯ ಕಾರ್ಯದರ್ಶಿ ಸೀತಾರಾಮ್ ಕುಂಟೆ ಈ ಆದೇಶವನ್ನು ಘೋಷಿಸಿದ್ದಾರೆ. ರಾಜ್ಯಕ್ಕೆ ಭೇಟಿ ನೀಡುವವರು ಕೋವಿಡ್-19 ಲಸಿಕೆಯ ಎರಡು ಡೋಸ್ ಗಳನ್ನು ಪಡೆದಿರಬೇಕು, ಎರಡನೇ ಡೋಸ್ ಪಡೆದು 15 ದಿನಗಳ ಅಂತರವಿರಬೇಕು. ಅಂತಹ ವ್ಯಕ್ತಿಯು ಕೋವಿನ್ ಪೋರ್ಟಲ್ ಮೂಲಕ ನೀಡುವ ಅಂತಿಮ ವ್ಯಾಕ್ಸಿನೇಷನ್ ಪ್ರಮಾಣಪತ್ರವನ್ನು ಹೊಂದಿರಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಅಂತಹ ವ್ಯಕ್ತಿಗಳು ರಾಜ್ಯಕ್ಕೆ ಭೇಟಿ ನೀಡಲು ಕಡ್ಡಾಯವಾಗಿ ನೆಗೆಟಿವ್ ಆರ್ ಟಿ- ಪಿಸಿಆರ್ ವರದಿಯನ್ನು ತೋರಿಸಬೇಕಾದ ಅಗತ್ಯವಿರುವುದಿಲ್ಲ, ಇದು ದೇಶಿಯ ಹಾಗೂ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಅನ್ವಯವಾಗಲಿದೆ ಎಂದು ಹೇಳಲಾಗಿದೆ. 

ಈ ವಿನಾಯಿತಿ ಆದೇಶದ ಹೊರತಾಗಿಯೂ ಎಲ್ಲಾ ಪ್ರಯಾಣಿಕರು ಕಡ್ಡಾಯವಾಗಿ ಕೋವಿಡ್ ನಿಯಮಗಳನ್ನು ಎಲ್ಲಾ ವೇಳೆಯಲ್ಲೂ ಪಾಲಿಸಬೇಕು ಎಂದು ಆದೇಶದಲ್ಲಿ ಹೇಳಲಾಗಿದೆ. ಇತರ ಎಲ್ಲ ವ್ಯಕ್ತಿಗಳಿಗೆ ಆರ್‌ಟಿ-ಪಿಸಿಆರ್ ಪರೀಕ್ಷೆಯ ಮಾನ್ಯತೆಯು  48 ಗಂಟೆಗಳ ಬದಲು 72 ಗಂಟೆಗಳಿರುತ್ತದೆ ಎಂದು ಅದು ಹೇಳಿದೆ.

SCROLL FOR NEXT