ದೇಶ

ರಾಜ್ಯಸಭೆ: ಕೋವಿಡ್ ಸಂಬಂಧಿತ ವಿಚಾರಗಳಿಗೆ ಸರ್ಕಾರದಿಂದ ಸಂಜೆ 5ಕ್ಕೆ ಉತ್ತರ

Srinivasamurthy VN

ನವದೆಹಲಿ: ಕೋವಿಡ್ ಸಂಬಂಧಿತ ವಿಚಾರಗಳಿಗೆ ಕೇಂದ್ರ ಸರ್ಕಾರ ಸಂಜೆ 5 ಗಂಟೆಗೆ ಉತ್ತರ ನೀಡಲಿದೆ ಎಂದು ರಾಜ್ಯಸಭೆ ಉಪಾಧ್ಯಕ್ಷ ಹರಿವಂಶ್ ನಾರಾಯಣ್ ಸಿಂಗ್ ಅವರು ಹೇಳಿದ್ದಾರೆ.

ಇಂದು ಕಲಾಪ ಆರಂಭಕ್ಕೂ ಮುನ್ನ ರಾಜ್ಯಸಭೆಯ ವಿಪಕ್ಷ ಮುಖಂಡರು ರಾಜ್ಯಸಭಾಧ್ಯಕ್ಷ ವೆಂಕಯ್ಯ ನಾಯ್ಡು ಅವರನ್ನು ಭೇಟಿ ಮಾಡಿ ಕೋವಿಡ್ ಸಂಬಂಧಿತ ವಿಚಾರಗಳಿಗೆ ಚರ್ಚೆಗೆ ಅವಕಾಶ ನೀಡಬೇಕು ಎಂದು ಮನವಿ ನೀಡಿದ್ದರು. ಇದಕ್ಕೆ ಸ್ಪಂದಿಸಿರುವ ವೆಂಕಯ್ಯ ನಾಯ್ಡು ಅವರು ಇಂದು ಸಂಜೆ 5 ಗಂಟೆಗೆ  ಸರ್ಕಾರಕ್ಕೆ ಉತ್ತರಿಸಲು ಸಮಯಾವಕಾಶ ನೀಡಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ಮಾಹಿತಿ ನೀಡಿದ ರಾಜ್ಯಸಭೆ ಉಪಾಧ್ಯಕ್ಷ ಹರಿವಂಶ್ ನಾರಾಯಣ್ ಸಿಂಗ್ ಅವರು, 'ಕೋವಿಡ್-19 ವಿಚಾರವಾಗಿ ಚರ್ಚೆಸಲು ಎಲ್ಲಾ ನಾಯಕರು ಬಯಸಿದ್ದು, ಈ ಸಂಬಂಧ ರಾಜ್ಯಸಭಾ ಅಧ್ಯಕ್ಷರು ಒಪ್ಪಿಗೆ ನೀಡಿದ್ದಾರೆ. ಮಧ್ಯಾಹ್ನ ಇದರ ಬಗ್ಗೆ ಚರ್ಚಿಸಲಾಗುವುದು. ನಾಲ್ಕು ಗಂಟೆಗಳ ಕಾಲ ಕೋವಿಡ್  ವಿಚಾರಗಳ ಕುರಿತು ಚರ್ಚಿಸಲಾಗುವುದು ಎಂದು ಸಭೆಯಲ್ಲಿ ಒಪ್ಪಿಗೆ ನೀಡಲಾಗಿದ್ದು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು ಸಂಜೆ 5 ಗಂಟೆಗೆ ಈ ಕುರಿತು ಉತ್ತರಿಸಲಿದ್ದಾರೆ ಎಂದು ಹೇಳಿದರು.

ಮೂಲಗಳ ಪ್ರಕಾರ, ರಾಜ್ಯಸಭಾ ಅಧ್ಯಕ್ಷ ಎಂ.ವೆಂಕಯ್ಯ ನಾಯ್ಡು, ಸದನ ಮುಖಂಡ ಪಿಯೂಷ್ ಗೋಯಲ್ ಮತ್ತು ಪ್ರತಿಪಕ್ಷ ನಾಯಕರಾದ ಆನಂದ್ ಶರ್ಮಾ, ಜೈರಾಮ್ ರಮೇಶ್, ಡೆರೆಕ್ ಒ'ಬ್ರಿಯೆನ್ ಮತ್ತು ತಿರುಚಿ ಶಿವಾ ಅವರು ಸಭೆ ನಡೆಸಿ ಚರ್ಚಿಸಿದರು ಎನ್ನಲಾಗಿದೆ. ಸದನದ ಕಾರ್ಯ ಪುನರಾರಂಭಕ್ಕೆ  ಸಹಕಾರ ಕೋರಿ ಪಿಯೂಷ್ ಗೋಯಲ್ ಈ ಹಿಂದೆ ಪ್ರತಿಪಕ್ಷ ನಾಯಕರೊಂದಿಗೆ ಅನೌಪಚಾರಿಕ ಚರ್ಚೆ ನಡೆಸಿದ್ದರು ಎಂದು ಮೂಲಗಳು ತಿಳಿಸಿವೆ.

ಸದನದ ಮೊದಲ ಮುಂದೂಡಿಕೆಯ ನಂತರ ಮಧ್ಯಾಹ್ನ 12 ಗಂಟೆಯವರೆಗೆ ಗೋಯಲ್ ಅವರು ವಿರೋಧ ಪಕ್ಷದ ನಾಯಕರೊಂದಿಗೆ ನಾಯ್ಡು ಅವರನ್ನು ಭೇಟಿಯಾಗಿದ್ದರು. 

SCROLL FOR NEXT