ದೇಶ

ದೈನಿಕ್ ಭಾಸ್ಕರ್ ಮೇಲಿನ ಐಟಿ ದಾಳಿ ಮಾಧ್ಯಮಗಳನ್ನು ಹೆದರಿಸುವ ಪ್ರಯತ್ನ: ಅರವಿಂದ್ ಕೇಜ್ರಿವಾಲ್

Vishwanath S

ನವದೆಹಲಿ: ದೈನಿಕ್ ಭಾಸ್ಕರ್ ಮತ್ತು ಭಾರತ್ ಸಮಾಚಾರ್ ಮಾಧ್ಯಮ ಸಂಸ್ಥೆಯ ಮೇಲಿನ ಐಟಿ ದಾಳಿ ಮಾಧ್ಯಮಗಳನ್ನು ಹೆದರಿಸುವ ಪ್ರಯತ್ನ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.

ಇಂತಹ ಕ್ರಮಗಳನ್ನು ತಕ್ಷಣ ನಿಲ್ಲಿಸಬೇಕು. ಮಾಧ್ಯಮಗಳಿಗೆ ಮುಕ್ತವಾಗಿ ಕೆಲಸ ಮಾಡಲು ಅವಕಾಶ ನೀಡಬೇಕು ಎಂದು ಅರವಿಂದ್ ಕೇಜ್ರಿವಾಲ್ ಒತ್ತಾಯಿಸಿದ್ದಾರೆ.

ತೆರಿಗೆ ವಂಚನೆ ಆರೋಪದ ಮೇಲೆ ಆದಾಯ ತೆರಿಗೆ ಇಲಾಖೆ ದೈನಿಕ್ ಭಾಸ್ಕರ್ ಗುಂಪು ಮತ್ತು ಉತ್ತರ ಪ್ರದೇಶ ಮೂಲದ ಹಿಂದಿ ಸುದ್ದಿ ಚಾನೆಲ್ ಭಾರತ್ ಸಮಾಚಾರ್ ವಿರುದ್ಧ ಅನೇಕ ನಗರಗಳಲ್ಲಿ ದಾಳಿ ನಡೆಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಐಟಿ ದಾಳಿ ಸಂಬಂಧ ಪ್ರತಿಕ್ರಿಯಿಸಿದ ಕೇಜ್ರಿವಾಲ್, 'ದೈನಿಕ್ ಭಾಸ್ಕರ್ ಮತ್ತು ಭಾರತ್ ಸಮಾಚಾರ್ ಮೇಲೆ ಆದಾಯ ತೆರಿಗೆ ದಾಳಿ ಮಾಧ್ಯಮಗಳನ್ನು ಹೆದರಿಸುವ ಪ್ರಯತ್ನವಾಗಿದೆ. ಸಂದೇಶ ಸ್ಪಷ್ಟವಾಗಿದ್ದು ಬಿಜೆಪಿ ಸರ್ಕಾರದ ವಿರುದ್ಧ ಮಾತನಾಡುವವರನ್ನು ಬಿಡಲಾಗುತ್ತಿಲ್ಲ. ಅಂತಹ ಆಲೋಚನೆ ತುಂಬಾ ಅಪಾಯಕಾರಿ ಎಂದರು.

ಪ್ರತಿಯೊಬ್ಬರೂ ಇದರ ವಿರುದ್ಧ ಧ್ವನಿ ಎತ್ತಬೇಕು. ಈ ದಾಳಿಗಳನ್ನು ತಕ್ಷಣವೇ ನಿಲ್ಲಿಸಬೇಕು ಮತ್ತು ಮಾಧ್ಯಮಗಳಿಗೆ ಮುಕ್ತವಾಗಿ ಕೆಲಸ ಮಾಡಲು ಅವಕಾಶ ನೀಡಬೇಕು ಕೇಜ್ರಿವಾಲ್ ಹೇಳಿದರು.

SCROLL FOR NEXT