ದೇಶ

ಉತ್ತರ ಪ್ರದೇಶದಲ್ಲಿ  ಭೀಕರ ಅಪಘಾತ: ಟ್ರಕ್ ಬಸ್ ಮೇಲೆ ಹರಿದು 18 ಮಂದಿ ಸ್ಥಳದಲ್ಲೇ ಸಾವು, ಪ್ರಧಾನಿ ಪರಿಹಾರ ಘೋಷಣೆ 

Sumana Upadhyaya

ಬಾರಾಬಂಕಿ(ಲಕ್ನೊ): ಟ್ರಕ್ ಬಸ್ಸಿಗೆ ಡಿಕ್ಕಿ ಹೊಡೆದ ಪರಿಣಾಮ 18 ಮಂದಿ ಸ್ಥಳದಲ್ಲಿಯೇ ಮೃತಪಟ್ಟು ಹಲವರು ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದ ಲಕ್ನೊ ವಲಯದ ಬಾರಾಬಂಕಿಯ ರಾಮ್ ಸನೆಹಿ ಘಾಟ್ ಬಳಿ ಕಳೆದ ತಡರಾತ್ರಿ ಸಂಭವಿಸಿದೆ.

ಗಾಯಗೊಂಡಿರುವ 19 ಮಂದಿ ಪ್ರಯಾಣಿಕರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಸ್ಸಿನಡಿ ಸಿಲುಕಿಕೊಂಡಿರುವ ಶವಗಳನ್ನು ಹೊರತೆಗೆಯುವ ಕಾರ್ಯ ನಡೆಯುತ್ತಿದೆ ಎಂದು ಲಕ್ನೊ ವಲಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ(ಎಡಿಜಿ)ನಾರಾಯಣ್ ಸಬತ್ ತಿಳಿಸಿದ್ದಾರೆ.

ಡಬವ್ ಡೆಕ್ಕರ್ ಬಸ್ಸು ಹರ್ಯಾಣದಿಂದ ಬಿಹಾರ ಕಡೆಗೆ ಪ್ರಯಾಣಿಸುತ್ತಿತ್ತು. ದುರ್ಘಟನೆ ಸಂಭವಿಸುವ ವೇಳೆ ತಡರಾತ್ರಿ ರಸ್ತೆ ಬದಿ ಬಸ್ಸನ್ನು ನಿಲ್ಲಿಸಲಾಗಿತ್ತು. ಈ ವೇಳೆ ಪ್ರಯಾಣಿಕರು ಬಸ್ಸಿನೊಳಗೇ ಇದ್ದರು. ಬಸ್ಸಿನಲ್ಲಿ ಸ್ವಲ್ಪ ತಾಂತ್ರಿಕ ದೋಷ ಕಂಡುಬಂದ ಹಿನ್ನೆಲೆಯಲ್ಲಿ ದುರಸ್ತಿಗೆಂದು ಚಾಲಕ ರಸ್ತೆ ಬದಿ ನಿಲ್ಲಿಸಿ ಪ್ರಯಾಣಿಕರಿಗೆ ತಿಳಿಸಿ ವಿಶ್ರಾಂತಿ ತೆಗೆದುಕೊಳ್ಳುವಂತೆ ಸೂಚಿಸಿದರು. 
ಆಗ ಹಿಂದಿನಿಂದ ಬಂದ ಟ್ರಕ್ ಡಿಕ್ಕಿ ಹೊಡೆದು ಭೀಕರ ದುರಂತ ಸಂಭವಿಸಿದೆ ಎಂದು ಎಡಿಜಿ ತಿಳಿಸಿದ್ದಾರೆ.

ಪ್ರಧಾನಿ ಸಂತಾಪ, ಪರಿಹಾರ ಘೋಷಣೆ: ಅಪಘಾತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ಸಂತಾಪ ಸೂಚಿಸಿರುವ ಪ್ರಧಾನಿ ನರೇಂದ್ರ ಮೋದಿ, ಕುಟುಂಬಸ್ಥರಿಗೆ ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ ತಲಾ 2 ಲಕ್ಷ ರೂಪಾಯಿ ಹಾಗೂ ಗಾಯಗೊಂಡವರಿಗೆ ತಲಾ 50 ಸಾವಿರ ರೂಪಾಯಿ ಪರಿಹಾರ ಘೋಷಿಸಿದ್ದಾರೆ.

SCROLL FOR NEXT