ದೇಶ

ಮೇ ತಿಂಗಳಲ್ಲಿ ನೀಡಿರುವ ಲಸಿಕೆ ಸಂಖ್ಯೆ ಬಗ್ಗೆ ಮಾಧ್ಯಮಗಳಲ್ಲಿ ತಪ್ಪು ವರದಿ: ಸರ್ಕಾರ 

Srinivas Rao BV

ನವದೆಹಲಿ: ಮೇ ತಿಂಗಳಲ್ಲಿ ನೀಡಿರುವ ಲಸಿಕೆ ಸಂಖ್ಯೆ ಬಗ್ಗೆ ಮಾಧ್ಯಮಗಳಲ್ಲಿ ತಪ್ಪು ವರದಿ ಪ್ರಕಟವಾಗಿದ್ದು ಇದಕ್ಕೆ ಯಾವುದೇ ಆಧಾರವಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ. 

ಜೂನ್ ತಿಂಗಳಲ್ಲಿ ಕೇಂದ್ರ ಸರ್ಕಾರ 120 ಮಿಲಿಯನ್ ಡೋಸ್ ಗಳ ಕೋವಿಡ್-19 ಲಸಿಕೆ ನೀಡುವುದಾಗಿ ಭರವಸೆ ನೀಡಿತ್ತು. ಆದರೆ ಮೇ ತಿಂಗಳಲ್ಲಿ ಲಭ್ಯವಿದ್ದ 79 ಮಿಲಿಯನ್ ಡೋಸ್ ಗಳ ಪೈಕಿ 58 ಮಿಲಿಯನ್  ಡೋಸ್ ಗಳಷ್ಟು ಲಸಿಕೆಯನ್ನು ಮಾತ್ರ ನೀಡಲಾಗಿದೆ ಎಂಬ ಆರೋಪ ಮಾಡಿ ಮಾಧ್ಯಮಗಳು ವರದಿ ಪ್ರಕಟಿಸಿದ್ದವು ಇದು ತಪ್ಪು ಮಾಹಿತಿಯಾಗಿದೆ ಹಾಗೂ ಯಾವುದೇ ಆಧಾರವಿಲ್ಲದ ವರದಿಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಧ್ಯಮಗಳ ವರದಿಯನ್ನು ತಿರಸ್ಕರಿಸಿದೆ. 

ಸಚಿವಾಲಯ ನೀಡಿರುವ ಮಾಹಿತಿಯ ಪ್ರಕಾರ ಜೂ.1 ರಂದು ಬೆಳಿಗ್ಗೆ 7 ಗಂಟೆ ವರೆಗೆ ಸಂಗ್ರಹಿಸಲಾಗಿರುವ ಸಚಿವಾಲಯದ ಡಾಟಾ ಪ್ರಕಾರ ಮೇ.1-31 ವರೆಗೂ ಒಟ್ಟಾರೆ 61.06 ಮಿಲಿಯನ್ ಲಸಿಕೆ ಡೋಸ್ ಗಳನ್ನು ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ನೀಡಲಾಗಿದೆ. ಒಟ್ಟಾರೆ, 16.22 ಮಿಲಿಯನ್ ಉಳಿದ ಹಾಗೂ ಬಳಕೆ ಮಾಡದ ಡೋಸ್ ಗಳು ರಾಜ್ಯಗಳ ಬಳಿ ಇದೆ. 

ಮೇ ತಿಂಗಳ 1-31 ವರೆಗೆ ಒಟ್ಟಾರೆ 79.45 ಮಿಲಿಯನ್ ಡೋಸ್ ಗಳಷ್ಟು ಲಸಿಕೆ ಲಭ್ಯವಿತ್ತು ಎಂದು ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ. ಲಸಿಕೆ ಲಭ್ಯತೆಯನ್ನು ಸುವ್ಯವಸ್ಥಿತಗೊಳಿಸುವುದಕ್ಕಾಗಿ ಕೇಂದ್ರ ಸರ್ಕಾರ ಲಸಿಕೆ ಉತ್ಪಾದಕರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಮೇ.1 ರಿಂದಲೇ ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಿಗೆ ವಿವಿಧ ಸಂಗ್ರಹದ ಆಯ್ಕೆಗಳನ್ನು ನೀಡಲಾಗಿದೆ. 

ಹಲವು ಮಾಧ್ಯಮಗಳ ವರದಿಗಳು ತಪ್ಪು ಮಾಹಿತಿಯನ್ನು ಪ್ರಕಟಿಸಿದ್ದವು, ಈ ವರೆಗೂ ಒಟ್ಟಾರೆ 21,85,46,667 ಲಸಿಕೆಯನ್ನು ನೀಡಲಾಗಿದೆ ಆದರೆ ಕೆಲವು ಮಾಧ್ಯಮಗಳು ಲಸಿಕೆ ನೀತಿಯನ್ನು ಪರಿಶೀಲಿಸದ ಉಲ್ಲೇಖಗಳನ್ನು ಆಧರಿಸಿ ಟೀಕಿಸುತ್ತಾ ಬಂದಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ. 

SCROLL FOR NEXT