ದೇಶ

ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆಗಳ ದರ ಪರಿಷ್ಕರಣೆ:‌ ಪ್ರತಿ ಡೋಸ್‌ ಕೋವಿಶೀಲ್ಡ್ ಬೆಲೆ ರೂ.780, ಕೋವ್ಯಾಕ್ಸಿನ್ ರೂ.1,410, ಸ್ಪುಟ್ನಿಕ್ ವಿ ಲಸಿಕೆಗೆ 1,145 ರೂ!

Srinivasamurthy VN

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ನಿನ್ನೆಯಷ್ಟೇ ನೂತನ ಲಸಿಕಾ ನೀತಿ ಪ್ರಕಟಿಸಿದ ಬೆನ್ನಲ್ಲೇ ಇದೀಗ ಕೇಂದ್ರ ಸರ್ಕಾರ ಖಾಸಗಿ ಆಸ್ಪತ್ರೆಗಳಲ್ಲಿ ನೀಡಲಾಗುವ ಲಸಿಕೆಗಳ ದರ ಪರಿಷ್ಕರಣೆ ಮಾಡಿದೆ.

ಹೌದು.. ಕೇಂದ್ರ ಆರೋಗ್ಯ ಸಚಿವಾಲಯ ಇಂದು ಖಾಸಗಿ ಆಸ್ಪತ್ರೆಗಳ ನೀಡಲಾಗುವ ಕೋವಿಡ್ ಲಸಿಕೆಗಳ ದರ ಪರಿಷ್ಕರಣೆ ಮಾಡಿದ್ದು, ಪ್ರತಿ ಡೋಸ್‌ ಕೋವಿಶೀಲ್ಡ್ ಬೆಲೆ ರೂ.780 ರೂಗೆ ನಿಗದಿ ಪಡಿಸಿದೆ. ಅಂತೆಯೇ ಮತ್ತೊಂದು ದೇಶೀ ನಿರ್ಮಿತ ಲಸಿಕೆ ಕೋವ್ಯಾಕ್ಸಿನ್ ನ ಪ್ರತೀ ಡೋಸ್ ಗೆ 1,410 ರೂ  ನಿಗದಿ ಮಾಡಲಾಗಿದ್ದು, ರಷ್ಯಾ ನಿರ್ಮಿತ ಸ್ಪುಟ್ನಿಕ್ ವಿ ಲಸಿಕೆಗೆ 1145 ರೂ ನಿಗದಿ ಮಾಡಿದೆ.

ನಿನ್ನೆ ದೇಶದಲ್ಲಿ ಲಸಿಕೆ ಸಂಗ್ರಹಣೆ ಮತ್ತು ವಿತರಣೆಯಲ್ಲಿ ಶೇ.75ರಷ್ಟನ್ನು ಕೇಂದ್ರ ಸರ್ಕಾರ ತೆಗೆದುಕೊಳ್ಳುತ್ತಿದೆ ಮತ್ತು 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಉಚಿತವಾಗಿ ಲಸಿಕೆಯನ್ನು ನೀಡಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದರು. ನಿನ್ನೆ ಸಂಜೆ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ್ದ ಪ್ರಧಾನಿ ಮೋದಿ,  ರಾಜ್ಯಗಳಿಗೆ ನೀಡಲಾದ ಶೇ.75ರಷ್ಟು ಉತ್ಪಾದನೆಯನ್ನು ಸರ್ಕಾರ ವಹಿಸಿಕೊಳ್ಳಲಿದೆ ಮತ್ತು ರಾಜ್ಯಗಳಿಗೆ ಉಚಿತವಾಗಿ ಲಸಿಕೆಗಳನ್ನು ಒದಗಿಸಲಿದೆ ಎಂದರು. ಆದಾಗ್ಯೂ, ಖಾಸಗಿ ಆಸ್ಪತ್ರೆಗಳು ಈ ಹಿಂದಿನ ಶೇ.25ರಷ್ಟು ಲಸಿಕೆಗಳನ್ನು ಖರೀದಿಸುವುದನ್ನ ಮುಂದುವರಿಸಬಹುದು. ಆದರೆ, ಸೇವಾ ಶುಲ್ಕವನ್ನು  ಮಿತಿಗೊಳಿಸಲಾಗಿದೆ ಎಂದು ಪ್ರಧಾನಿ ಹೇಳಿದ್ದರು.

'18 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತವಾಗಿ ಲಸಿಕೆಯನ್ನು ಸರ್ಕಾರ ಹಾಕಲಿದೆ. ಆದಾಗ್ಯೂ, ಉಚಿತ ಲಸಿಕೆಗಳನ್ನು ಬಯಸದವರಿಗೆ, ಲಸಿಕೆ ಪಡೆಯಲು ಖಾಸಗಿ ಆಸ್ಪತ್ರೆಗೆ ಹೋಗಲು ಬಯಸಿದರೆ, ಅವರಿಗೆ ಅನುಮತಿ ನೀಡಲಾಗುವುದು. ದೇಶದಲ್ಲಿ, ಶೇ.25ರಷ್ಟು ಲಸಿಕೆಗಳನ್ನು ಖಾಸಗಿ ಆಸ್ಪತ್ರೆಗಳು ನೇರವಾಗಿ  ಖರೀದಿಸುತ್ತಿವೆ. ಅದನ್ನು ಮುಂದುವರೆಸಬಹುದು. ಖಾಸಗಿ ಆಸ್ಪತ್ರೆಗಳು ಲಸಿಕೆಯ ಒಂದು ಡೋಸ್ ಮೇಲೆ ಸೇವಾ ಶುಲ್ಕವಾಗಿ ಗರಿಷ್ಠ 150ರೂ.ಗಳನ್ನು ವಿಧಿಸಬಹುದು. ಇದರ ಮೇಲ್ವಿಚಾರಣೆ ರಾಜ್ಯ ಸರ್ಕಾರಗಳಿಗೆ ಬಿಟ್ಟದ್ದು' ಎಂದು ಪ್ರಧಾನಿ ಹೇಳಿದ್ದರು.

SCROLL FOR NEXT