ದೇಶ

ಸಂಕಷ್ಟದ ನಡುವೆಯೂ ಮಗನನ್ನು ಐಎಎಫ್ ಅಧಿಕಾರಿಯನ್ನಾಗಿಸಿದ ಆಟೋ ಚಾಲಕ!

Srinivas Rao BV

ವಿಶಾಖಪಟ್ಟಣಂ: ವಿಶಾಖಪಟ್ಟಣಂ ನ ಆಟೋ ಚಾಲಕನ ಪುತ್ರ ಐಎಎಫ್ ನ ಫ್ಲೈಯಿಂಗ್ ಅಧಿಕಾರಿಯಾಗಿ ನೇಮಕಗೊಂಡಿದ್ದು ಪೋಷಕರು ಹೆಮ್ಮೆಪಡುವಂತೆ ಮಾಡಿದ್ದಾರೆ. ತೆಲುಗು ಭಾಷಿಕರ ಎರಡೂ ರಾಜ್ಯಗಳಿಂದ ಈ ವರ್ಷ ಐಎಎಫ್ ಗೆ ಆಯ್ಕೆಯಾದ ಏಕೈಕ ವ್ಯಕ್ತಿ ಜಿ.ಗೋಪಿನಾಥ್ ಆಗಿದ್ದು, ಹೈದರಾಬಾದ್ ನ ದುಂಡಿಗಲ್ ಏರ್ ಫೋರ್ಸ್ ಅಕಾಡೆಮಿಯಲ್ಲಿ ಗೋಪಿನಾಥ್ ಐಎಎಫ್ ಗೆ ಸೇರ್ಪಡೆಯಾಗಿದ್ದಾರೆ. 

ಗೋಪಿನಾಥ್ ಅವರ ತಂದೆ ಸೂರಿ ಬಾಬು ಅರಿಲೋವಾದ ಎಸ್ ಐಜಿ ನಗರದ ನಿವಾಸಿಯಾಗಿದ್ದು 25 ವರ್ಷಗಳಿಂದ ಆಟೋ ಚಾಲಕನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆರ್ಥಿಕ ಸಂಕಷ್ಟದ ನಡುವೆಯೂ ಇಬ್ಬರು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿರುವ ಸೂರಿಬಾಬು ಐಎಎಫ್ ಸೇರುವ ತನ್ನ ಮಗನ ಕನಸನ್ನು ನನಸು ಮಾಡಿದ್ದಾರೆ. 

"ನನ್ನ ತಂದೆ ಶ್ರೀಮಂತರಲ್ಲದೇ ಇದ್ದರೂ ಅತ್ಯಂತ ಶ್ರಮ ವಹಿಸಿ ನನ್ನ ಹಾಗೂ ಸಹೋದರಿಯ ಶಿಕ್ಷಣಕ್ಕೆ ಬೇಕಿರುವ ಅಗತ್ಯತೆಗಳನ್ನು ಈಡೇರಿಸಿದ್ದಾರೆ. ನನ್ನ ಪೋಷಕರು ನನಗೋಸ್ಕರ ಸಾಕಷ್ಟು ಮಾಡಿದ್ದಾರೆ, ಅವರ ಶ್ರಮಕ್ಕೆ ತಕ್ಕ ಪ್ರತಿಫಲ ನೀಡುವುದಕ್ಕಾಗಿ ಅವರು ಹೆಮ್ಮೆ ಪಡುವಂತಾಗಬೇಕು ಎಂದುಕೊಂಡಿದ್ದೆ" ಎಂದು ಗೋಪಿನಾಥ್ ಪೋಷಕರ ಕುರಿತು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿದ್ದಾರೆ. 

ಸೂರಿಬಾಬು ಅವರಿಗೆ ತನ್ನ ಮಗ ಇಂಜಿನಿಯರಿಂಗ್ ಮಾಡಬೇಕೆಂಬ ಕನಸಿತ್ತು, ಅದಕ್ಕಾಗಿ ಅವರು ಸಾಲ ಮಾಡುವುದಕ್ಕೂ ಮುಂದಾಗಿದ್ದರು. ಆದರೆ ಗೋಪಿನಾಥ್ ಅವರು ಭಾರತೀಯ ಸೇನೆಯಲ್ಲಿ ಸಿಪಾಯಿಯಾಗಿದ್ದ ತನ್ನ ತಾತನಂತಾಗಲು ಪದವಿಗೆ ಸೇರಿಕೊಂಡರು.  ಆದರೆ ಐಎಎಫ್ ನಲ್ಲಿ ಅಧಿಕಾರಿಯಾಗುವ ಕನಸನ್ನು ಮಾತ್ರ ಬಿಡಲಿಲ್ಲ. 

ಐಎಎಫ್ ಸೇರ್ಪಡೆಯಾದ ಬಳಿಕ ಪದವಿಯನ್ನು ಪೂರ್ಣಗೊಳಿಸಿದ ಅವರು ಆಂಧ್ರಪ್ರದೇಶ ವಿವಿಯ ದೂರಶಿಕ್ಷಣದಿಂದ ಪದವಿ ಹಾಗೂ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿ, ಕಳೆದ ವರ್ಷ ಕ್ರಿಪ್ಟೋಗ್ರಾಫರ್ ಆಗಿ ಬಡ್ತಿ ಪಡೆದರು. ಈಗ ಎಸ್ಎಸ್ ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಐಎಎಫ್ ಅಧಿಕಾರಿಯಾಗಿ ನೇಮಕಗೊಂಡಿದ್ದಾರೆ. ಗೋಪಿನಾಥ್ ಸಹೋದರಿ ಗೌರಿ ತನ್ನ ಸಹೋದರನ ಸಾಧನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.  
 

SCROLL FOR NEXT