ದೇಶ

ಭಾರತದಲ್ಲಿ ವಾಟ್ಸ್ ಆಪ್ ನಿಷೇಧಿಸಲು ನಿರ್ದೇಶನ ಕೋರಿ ಕೇರಳ ಹೈಕೋರ್ಟ್ ಗೆ ಸಾಫ್ಟ್ ವೇರ್ ಇಂಜಿನಿಯರ್ ಅರ್ಜಿ!

Srinivas Rao BV

ನವದೆಹಲಿ: ಭಾರತದಲ್ಲಿ ವಾಟ್ಸ್ ಆಪ್ ನಿಷೇಧಿಸಲು ನಿರ್ದೇಶನ ಕೋರಿ ಕೇರಳ ಹೈಕೋರ್ಟ್ ಗೆ ಸಾಫ್ಟ್ ವೇರ್ ಇಂಜಿನಿಯರ್ ಒಬ್ಬರು ಅರ್ಜಿ ಸಲ್ಲಿಸಿದ್ದಾರೆ. 

ಭಾರತದ ಕಾನೂನನ್ನು ಪಾಲಿಸಲು ವಾಟ್ಸ್ ಆಪ್ ಅಧಿಕಾರಿಗಳೊಂದಿಗೆ ಸಹಕರಿಸುತ್ತಿಲ್ಲವಾದ ಕಾರಣ ಭಾರತದಲ್ಲಿ ವಾಟ್ಸ್ ಆಪ್ ಕಾರ್ಯನಿರ್ವಹಣೆಯನ್ನು ನಿಷೇಧಿಸಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಕೇರಳದ ಹೈಕೋರ್ಟ್ ಗೆ ಕುಮಾಲಿ, ಇಡುಕ್ಕಿಯ ಕೆ.ಜಿ ಒಮನಕುಟ್ಟನ್ ಮನವಿ ಮಾಡಿದ್ದಾರೆ. 

ಮೆಸೇಜಿಂಗ್ ಆಪ್ ಆಗಿರುವ ವಾಟ್ಸ್ ಆಪ್ ಹೊಸ ಐಟಿ ಕಾನೂನು ಪಾಲನೆಗೆ ಸಹಕರಿಸುತ್ತಿಲ್ಲ. ಹೊಸ ಕಾನೂನಿನ ಪ್ರಕಾರ ಸುಳ್ಳು ಸುದ್ದಿಗಳಿಗೆ, ದ್ವೇಷ ಹರಡಿಸುವ ಸುದ್ದಿಗಳಿಗೆ ಕಡಿವಾಣ ಹಾಕಲು ಮೆಸೇಜ್ ಗಳ ಮೂಲವನ್ನು ಗುರುತಿಸುವುದಕ್ಕೆ ಸಾಧ್ಯವಾಗುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕಿದೆ. 

ಆದರೆ ವಾಟ್ಸ್ ಆಪ್ ಈ ಹೊಸ ನಿಯಮಗಳನ್ನು ಪ್ರಶ್ನಿಸಿ ದೆಹಲಿ ಕೋರ್ಟ್ ಮೆಟ್ಟಿಲೇರಿದೆ. ಹೊಸ ಐಟಿ ನಿಯಮಗಳನ್ನು ಪಾಲಿಸಬೇಕಾದಲ್ಲಿ ಪ್ರಜೆಗಳ ಗೌಪ್ಯತೆಯನ್ನು ಉಲ್ಲಂಘನೆ ಮಾಡಿದಂತಾಗಲಿದೆ ಎಂದು ವಾಟ್ಸ್ ಆಪ್ ವಾದಿಸಿದೆ. ಆದರೆ ವಾಟ್ಸ್ ಆಪ್ ಸ್ವತಃ ತನ್ನ ಗ್ರಾಹಕರ ಗೌಪ್ಯತೆಯನ್ನು ಉಲ್ಲಂಘನೆ ಮಾಡಿದ್ದು, ಈ ನೆಲದ ಕಾನೂನನ್ನು ದೂಷಿಸುವಂತಿಲ್ಲ ಎಂದು ಸಾಫ್ಟ್ ವೇರ್ ಇಂಜಿನಿಯರ್ ಆರೋಪಿಸಿದ್ದಾರೆ.

ಟೆಕ್ಸ್ಟ್, ಇಮೇಜ್, ವಿಡೀಯೋಗಳ ರೂಪದಲ್ಲಿ ಸುಳ್ಳು ಮಾಹಿತಿಯನ್ನು ವ್ಯಾಪಕವಾಗಿ ಹರಡಲಾಗುತ್ತಿದೆ. ಎಲ್ಲಾ ಪಕ್ಷಗಳ ಪ್ರಮುಖ ವ್ಯಕ್ತಿಗಳ ತೇಜೋವಧೆಗೆ ಇಂತಹ ಸುಳ್ಳು ಮಾಹಿತಿಗಳನ್ನು ಬಳಸಿಕೊಳ್ಳಲಾಗುತ್ತಿದೆ. ಈ ಆಪ್ ನ್ನು ದೇಶ ವಿರೋಧಿಗಳು ತಮ್ಮ ಮೆಸೇಜ್ ಗಳನ್ನು ಹಾಗೂ ಮಾಹಿತಿಗಳನ್ನು ಹರಡುವುದಕ್ಕೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಬೆದರಿಕೆ, ಹನಿ ಟ್ರಾಪ್, ಫೇಕ್ ವೀಸಾ, ಅಡ್ಮಿಷನ್ ಹಾಗೂ ಉದ್ಯೋಗಗಳ ಸುಳ್ಳು ಭರವಸೆ ನೀಡುವಂತಹ ಕ್ರಿಮಿನಲ್ ಚಟುವಟಿಕೆಗಳಿಗೆ ಈ ಆಪ್ ನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಕೆ.ಜಿ ಒಮನಕುಟ್ಟನ್ ಅರ್ಜಿಯಲ್ಲಿ ಆರೋಪಿಸಿದ್ದಾರೆ. ರಾಷ್ಟ್ರೀಯ ಭದ್ರತೆಯ ವಿಷಯ ಬಂದಾಗಲೂ ವಾಟ್ಸ್ ಆಪ್ ಎಂಡ್-ಟು-ಎಂಡ್ ಎನ್ಕ್ರಿಪ್ಟೆಡ್ ಆಗಿದೆ ಎಂಬ ಕಾರಣ ನೀಡುತ್ತದೆ.

ದೇಶದ ಹಿತಾಸಕ್ತಿಗೆ ವಿರೋಧವಿರುವ ಹಲವು ಆಪ್ ಗಳನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ ವಾಟ್ಸ್ ಆಪ್ ನ್ನೂ ನಿಷೇಧಿಸಲು ಕೇಂದ್ರಕ್ಕೆ ನಿರ್ದೇಶನ ನೀಡಬೇಕೆಂದು ಹೈಕೋರ್ಟ್ ಗೆ ಸಲ್ಲಿಸಲಾಗಿರುವ ಅರ್ಜಿಯಲ್ಲಿ ಮನವಿ ಮಾಡಲಾಗಿದೆ.

SCROLL FOR NEXT