ದೇಶ

ಕೋವಿನ್ ಬಗ್ಗೆ 50 ಕ್ಕೂ ಹೆಚ್ಚು ರಾಷ್ಟ್ರಗಳು ಆಸಕ್ತ; ಉಚಿತವಾಗಿ ಸಾಫ್ಟ್‌ವೇರ್ ಹಂಚಿಕೊಳ್ಳಲು ಭಾರತ ಸಿದ್ಧ: ಅಧಿಕಾರಿ

Nagaraja AB

ನವದೆಹಲಿ: ಕೆನಡಾ, ಮೆಕ್ಸಿಕೊ, ನೈಜಿರಿಯಾ ಮತ್ತು ಪನಾಮಾ ಸೇರಿದಂತೆ ಸುಮಾರು 50 ರಾಷ್ಟ್ರಗಳು, ಕೋ-ವಿನ್ ನಂತಹ ವ್ಯವಸ್ಥೆ ಬಗ್ಗೆ ಆಸಕ್ತಿ ಹೊಂದಿದ್ದು, ಉಚಿತ ದರದಲ್ಲಿ ಓಪನ್ ಸೋರ್ಸ್ ಸಾಫ್ಟ್ ವೇರ್ ಹಂಚಿಕೊಳ್ಳಲು ಭಾರತ ಸಿದ್ಧವಿರುವುದಾಗಿ ಹಿರಿಯ ಅಧಿಕಾರಿಯೊಬ್ಬರು ಸೋಮವಾರ ಹೇಳಿದ್ದಾರೆ.

ಓಪನ್ ಸೋರ್ಸ್ ಆವೃತ್ತಿಯ ವೇದಿಕೆ ರಚಿಸಿ ಅದನ್ನು ಬಯಸುವ ಯಾವುದೇ ದೇಶಕ್ಕೆ ಉಚಿತವಾಗಿ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ ಎಂದು ಕೋವಿಡ್ -19 ಲಸಿಕೆ ಆಡಳಿತದ ಸಶಕ್ತ ಗುಂಪಿನ ಅಧ್ಯಕ್ಷ ಡಾ.ಆರ್.ಎಸ್.ಶರ್ಮಾ ತಿಳಿಸಿದ್ದಾರೆ.

ಎರಡನೇ ಪಬ್ಲಿಕ್ ಹೆಲ್ತ್ ಶೃಂಗಸಭೆ 2021ರಲ್ಲಿ ಮಾತನಾಡಿದ ಅವರು, ಕೋವಿನ್ ಸಾಕಷ್ಟು ಪ್ರಸಿದ್ಧಿಯಾಗಿದ್ದು, ಕೇಂದ್ರೀಯ ಏಷ್ಯಾ, ಲ್ಯಾಟಿನ್ ಅಮೆರಿಕ, ಆಫ್ರಿಕಾದ 50 ರಾಷ್ಟ್ರಗಳು ಕೋವಿನ್ ನಂತಹ ವ್ಯವಸ್ಥೆ ಬಗ್ಗೆ ಆಸಕ್ತಿ ಹೊಂದಿವೆ ಎಂದು ಹೇಳಿದರು. 

ಜುಲೈ 5 ರಂದು ವಿಶ್ವದಾದ್ಯಂತದ ಆರೋಗ್ಯ ಮತ್ತು ತಂತ್ರಜ್ಞಾನ ತಜ್ಞರ ವರ್ಚುವಲ್ ಜಾಗತಿಕ ಸಮಾವೇಶ ನಡೆಯಲಿದ್ದು, ಈ ವ್ಯವಸ್ಥೆಯು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಭಾರತ ಹಂಚಿಕೊಳ್ಳಲಿದೆ ಎಂದು ಅವರು ತಿಳಿಸಿದರು.

ಈ ವ್ಯವಸ್ಥೆಯು ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ವಿಶ್ವಕ್ಕೆ ಹೇಳುತ್ತೇವೆ. ಮೂಲ ಸಾಫ್ಟ್‌ವೇರ್ ಅನ್ನು ಉಚಿತವಾಗಿ ಹಂಚಿಕೊಳ್ಳಲು ನಾವು ಸಿದ್ಧರಿದ್ದೇವೆ  ಕೆನಡಾ, ಮೆಕ್ಸಿಕೊ, ಪನಾಮ, ಪೆರು, ಉಕ್ರೇನ್, ನೈಜೀರಿಯಾ, ಉಗಾಂಡಾದಿಂದ ದೊಡ್ಡ ಆಸಕ್ತಿ ಬಂದಿದೆ ಎಂದು ಅವರು ಹೇಳಿದರು.

ವಿಯೆಟ್ನಾಂ, ಇರಾಕ್, ಡೊಮಿನಿಕನ್ ರಿಪಬ್ಲಿಕ್, ಯುಎಇ ಕೂಡಾ ಕೋವಿನ್ ವೇದಿಕೆ ಬಗ್ಗೆ ಆಸಕ್ತಿ ಹೊಂದಿರುವುದಾಗಿ ಮೂಲಗಳಿಂದ ತಿಳಿದುಬಂದಿದೆ.

SCROLL FOR NEXT