ದೇಶ

ಬಂಗಾಳಕ್ಕೆ ಟಿಎಂಸಿ, ತ.ನಾಡಿನಲ್ಲಿ ಡಿಎಂಕೆ, ಕೇರಳದಲ್ಲಿ ಎಲ್ ಡಿಎಫ್ ಗೆಲುವು; ಅಸ್ಸಾಂ ನಲ್ಲಿ ಬಿಜೆಪಿ ಮತ್ತೆ ಅಧಿಕಾರದತ್ತ

Srinivas Rao BV

ನವದೆಹಲಿ: ಕೊರೋನಾ ಭೀತಿಯ ನಡುವೆಯೂ ತೀವ್ರ ಕುತೂಹಲ ಮೂಡಿಸಿದ್ದ ಪಂಚ ರಾಜ್ಯಗಳ ಚುನಾವಣೆಯ ಮತ ಎಣಿಕೆ ಒಂದು ಹಂತಕ್ಕೆ ಬಂದಿದ್ದು, ಗೆಲುವಿನ ಅಂದಾಜು ಲಭ್ಯವಾಗತೊಡಗಿದೆ. 

ಅದರಲ್ಲೂ ಎಲ್ಲರ ಚಿತ್ತ ಇದ್ದದ್ದು ಪಶ್ಚಿಮ ಬಂಗಾಳದ ಮೇಲೆ. ಈ ರಾಜ್ಯದಲ್ಲಿ ತೀವ್ರ ಅಬ್ಬರದ ಪ್ರಚಾರ ನಡೆಸಿದ್ದ ಬಿಜೆಪಿ ಪ್ರಾರಂಭಿಕ ಹಂತದ ಮತ ಎಣಿಕೆ ವೇಳೆ ಟಿಎಂಸಿ ಗೆ ಭರ್ಜರಿ ಪೈಪೋಟಿಯನ್ನೇ ನೀಡಿತ್ತಾದರೂ ಕ್ರಮೇಣ ತನ್ನ ಮುನ್ನಡೆಯ ಅಂತರವನ್ನು ಕಳೆದುಕೊಳ್ಳಲಾರಂಭಿಸಿತು. ಈ ಮೂಲಕ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಮ್ಯಾಜಿಕ್ ನಂಬರ್ ಸಂಖ್ಯೆಗೆ ಅಗತ್ಯವಿರುವಷ್ಟು ಮುನ್ನಡೆ ಸಾಧಿಸಿ ಮೂರನೇ ಬಾರಿಗೆ ಅಧಿಕಾರ ಹಿಡಿದಿದೆ. ಬಿಜೆಪಿಗೆ ಅಧಿಕಾರ ಹಿಡಿಯುವ ಕನಸು ನನಸಾಗಿಲ್ಲವಾದರೂ ನೆಲೆಯೇ ಇಲ್ಲದ ರಾಜ್ಯದಲ್ಲಿ ಈ ಬಾರಿ  ಟಿಎಂಸಿಗೆ ಪ್ರಬಲ ಪೈಪೋಟಿ ನೀಡಿ ಎರಡನೇ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. 

ಇನ್ನು ಯಥಾ ಪ್ರಕಾರ ತಮಿಳುನಾಡಿನಲ್ಲಿ ಬಿಜೆಪಿ ನೇತೃತ್ವಕ್ಕೆ ಈ ಬಾರಿ ಮತದಾರ ಮಣೆ ಹಾಕಿಲ್ಲ. ಆದರೆ ಆಡಳಿತಾರೂಢ ಎಐಎಡಿಎಂಕೆಗೆ ಮುಖಭಂಗವಾಗಿದ್ದು, ತಮಿಳುನಾಡಿನಲ್ಲಿ ಡಿಎಂಕೆ ಆಡಳಿತ ಪ್ರಾರಂಭವಾಗಲಿದೆ. 
 
ಕೇರಳದಲ್ಲಿ ಆಡಳಿತಾರೂಢ ಲೆಫ್ಟ್ ಡೆಮಾಕ್ರೆಟಿಕ್ ಫ್ರಂಟ್ 140 ಕ್ಷೇತ್ರಗಳ ಪೈಕಿ 89 ರಲ್ಲಿ ಮುನ್ನಡೆಯಲ್ಲಿದ್ದು ಬಹುಮತ ಪಡೆಯುವ ಎಲ್ಲಾ ಸಾಧ್ಯತೆಗಳೂ ಇವೆ. ವಿಪಕ್ಷ ಯುಡಿಎಫ್ 45 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದೆ. 

ಅಸ್ಸಾಂ ನಲ್ಲಿ 126 ಕ್ಷೇತ್ರಗಳ ಪೈಕಿ ಬಿಜೆಪಿ ನೇತೃತ್ವದ ಎನ್ ಡಿಎ 79 ರಲ್ಲಿ ಮುನ್ನಡೆಯಲ್ಲಿದ್ದರೆ, ಯುಪಿಎ 46 ರಲ್ಲಿ ಇತರರು ಒಂದರಲ್ಲಿ ಮುನ್ನಡೆ ಸಾಧಿಸಿದ್ದಾರೆ. ಈ ಮೂಲಕ ಎನ್ ಡಿಎ ಅಧಿಕಾರ ಹಿಡಿಯುವುದು ಸ್ಪಷ್ಟವಾದಂತಿದೆ.  

ಇನ್ನು 30 ಕ್ಷೇತ್ರಗಳಿರುವ ಕೇಂದ್ರಾಡಳಿತ ಪ್ರದೇಶವಾದ ಪುದುಚೆರಿಯಲ್ಲಿ ಇತ್ತೀಚಿನ ವರದಿಯ ಪ್ರಕಾರ ಎನ್ ಆರ್ ಸಿ ಮೈತ್ರಿಕೂಟ 11 ರಲ್ಲಿ, ಯುಪಿಎ 6 ರಲ್ಲಿ ಮುನ್ನಡೆಯಲ್ಲಿವೆ. 

SCROLL FOR NEXT