ದೇಶ

ಕೊರೋನಾ ವೈರಸ್ ಹೊಸ ರೂಪಾಂತರಿ ತಳಿ ಕಿರಿಯ ವಯಸ್ಸಿನವರಲ್ಲಿ ಅತ್ಯಂತ ವೇಗವಾಗಿ ಹರಡುತ್ತಿದೆ: ಆಂಧ್ರ ಪ್ರದೇಶ ಸರ್ಕಾರ

Srinivasamurthy VN

ಅಮರಾವತಿ: ಆಂಧ್ರ ಪ್ರದೇಶದಲ್ಲಿ ಪತ್ತೆಯಾಗಿರುವ ಕೊರೋನಾ ವೈರಸ್ ನ ಹೊಸ ತಳಿ ಅತ್ಯಂತ ವೇಗವಾಗಿ ಹರಡುತ್ತಿದ್ದು, ಪ್ರಮುಖವಾಗಿ ಕಿರಿಯ ವಯಸ್ಸಿನವರಲ್ಲಿ ಸೋಂಕು ಉಲ್ಬಣವಾಗುತ್ತಿದೆ ಎಂದು ಆಂಧ್ರ ಪ್ರದೇಶ ಸರ್ಕಾರ ಹೇಳಿದೆ.

ಆಂಧ್ರ ಪ್ರದೇಶದಲ್ಲಿ ಪತ್ತೆಯಾಗಿರುವ ಕೊರೋನಾವೈರಸ್ ನ B.1.617 ಮತ್ತು B.1ರೂಪಾಂತರಿ ತಳಿ ಕುರಿತು ಆಂಧ್ರ ಪ್ರದೇಶ ಸರ್ಕಾರ ಮಾಹಿತಿ ನೀಡಿದ್ದು, ಕೊರೋನಾ ವೈರಸ್ ಹೊಸ ತಳಿ 'ಅತ್ಯಂತ ಸಾಂಕ್ರಾಮಿಕ'ವಾಗಿದ್ದು, ಕಿರಿಯ ವಯಸ್ಸಿನವರಲ್ಲಿ ವೇಗವಾಗಿ ಹರಡುತ್ತಿದೆ. ಈ ಮಾದರಿಯ ವೈರಸ್  ತಳಿಗಳು ಆಂಧ್ರ ಪ್ರದೇಶ ಮಾತ್ರವಲ್ಲದೇ ಕರ್ನಾಟಕ ಮತ್ತು ತೆಲಂಗಾಣದಲ್ಲೂ ಪತ್ತೆಯಾಗಿದೆ. ಈ ಮಾದರಿಯ ವೈರಸ್ 16ಪಟ್ಟು ವೇಗವಾಗಿ ಹರಡಲಿದ್ದು, ಇದು ವಯಸ್ಕರಲ್ಲದೆ ಕಿರಿಯ ವಯಸ್ಸಿನವರಲ್ಲೂ ಸೋಂಕು ವೇಗವಾಗಿ ಹರಡುತ್ತಿವೆ ಎಂದು ಹೇಳಿದೆ.

ಉತ್ತರ ಭಾರತದಲ್ಲಿ ಆತಂಕಕ್ಕೆ ಕಾರಣವಾಗಿದ್ದ ಇಮ್ಮಡಿ ರೂಪಾಂತರಿ ಕೊರೋನಾ ವೈರಸ್ ತಳಿಯಾದ ಎನ್ 440 ಕೆ ಪರಿಣಾಮ ತೀವ್ರವಾಗಿಲ್ಲ. ಅದು ಸಾಂಕ್ರಾಮಿಕವಾಗಿ ಉಳಿದಿಲ್ಲ. ಏಪ್ರಿಲ್ ತಿಂಗಳಿನಲ್ಲಿ ಪತ್ತೆಯಾದ ಸೋಂಕು ಮಾದರಿಗಳ ಪರೀಕ್ಷೆಗಳ ಬಳಿಕ ದಕ್ಷಿಣ ಭಾರತದ ರಾಜ್ಯಗಳು (ಕರ್ನಾಟಕ,  ಆಂಧ್ರಪ್ರದೇಶ ಮತ್ತು ತೆಲಂಗಾಣ)ದಲ್ಲಿ ಬಿ .1.617 ಮತ್ತು ಬಿ 1 ರೂಪಾಂತರಿ ಕೊರೋನಾ ವೈರಸ್ ಇರುವಿಕೆ ಪತ್ತೆಯಾಗಿದೆ ಎಂದು ಆಣ್ವಿಕ ಜೀವಶಾಸ್ತ್ರ ಕೇಂದ್ರದ ಅಧ್ಯಯನವನ್ನು ಉಲ್ಲೇಖಿಸಿ ರಾಜ್ಯ ಆರೋಗ್ಯ ಇಲಾಖೆ ಹೇಳಿದೆ.

ವಿಶ್ವ ಆರೋಗ್ಯ ಸಂಸ್ಥೆ ಹೊರಡಿಸಿದ ಏಪ್ರಿಲ್ 25 ರ ಕೋವಿಡ್-19 ವಾರದ ಎಪಿಡೆಮಿಯೋಲಾಜಿಕಲ್ ಅಪ್‌ಡೇಟ್ ನಲ್ಲಿ, ಭಾರತದಲ್ಲಿ ಪತ್ತೆಯಾಗಿರುವ B.1.617 ವೈರಸ್ ನ ವಂಶಾವಳಿಯ ಬಗ್ಗೆ ಉಲ್ಲೇಖಿಸಿದೆ. ಆದರೆ N440K ರೂಪಾಂತರದ ಬಗ್ಗೆ ಉಲ್ಲೇಖಿಸಿಲ್ಲ. ಆಂಧ್ರ, ತೆಲಂಗಾಣ ಮತ್ತು  ಕರ್ನಾಟಕದಿಂದ ಸಂಗ್ರಹಿಸಲಾದ ಮಾದರಿಗಳನ್ನು ಹೈದರಾಬಾದ್‌ನ ಸಿಸಿಎಂಬಿಯಲ್ಲಿ ಜೀನೋಮ್ ಪರೀಕ್ಷೆಗೊಳಪಡಿಸಲಾಗಿದೆ. ಪ್ರತಿದಿನ ಆಂಧ್ರ ಪ್ರದೇಶ ಲ್ಯಾಬ್‌ಗಳಿಂದ ಸರಾಸರಿ 250 ಮಾದರಿಗಳನ್ನು ಸಿಸಿಎಂಬಿಗೆ ಕಳುಹಿಸಲಾಗುತ್ತಿದೆ ಎಂದು ಆಂಧ್ರಪ್ರದೇಶ ಕೋವಿಡ್ ಕಮಾಂಡ್ ಮತ್ತು ಕಂಟ್ರೋಲ್  ಕೇಂದ್ರದ ಅಧ್ಯಕ್ಷ ಕೆ.ಎಸ್.ಜವಾಹರ್ ರೆಡ್ಡಿ ಹೇಳಿದ್ದಾರೆ. 

'2020 ರ ಜೂನ್-ಜುಲೈ ನಲ್ಲಿ ಎನ್ 440 ಕೆ ತಳಿ (ಬಿ .1.36) ಪತ್ತೆಯಾಗಿತ್ತು. ಇದರ ಪರಿಣಾಮ 2020 ಡಿಸೆಂಬರ್ ರಿಂದ 2021ರ ಜನವರಿ ಮತ್ತು ಫೆಬ್ರವರಿವರಗೂ ಪ್ರಚಲಿತದಲ್ಲಿತ್ತು. ಬಳಿಕ ಇದರ ಪರಿಣಾಮ ಮಾರ್ಚ್ ನಲ್ಲಿ ತೀವ್ರವಾಗಿ ಕುಸಿದಿತ್ತು. ಪ್ರಸ್ತುತ ಪತ್ತೆಯಾಗುತ್ತಿರುವ ಸೋಂಕಿತರಲ್ಲಿ ಈ  ಎನ್ 440 ಕೆ ತಳಿಯು ಪತ್ತೆಯಾಗುವಿಕೆ ಬಹುತೇಕ ಕಡಿಮೆಯಾಗಿದೆ. ಇದುವರೆಗಿನ ಸಂಶೋಧನಾ ಮಾಹಿತಿಯು ಎನ್ 440 ಕೆ ರೂಪಾಂತರಿ ವೈರಸ್ ಅತ್ಯಂತ ಸಾಂಕ್ರಾಮಿಕ ವೈರಸ್‌ ಎಂದು ದೃಢ ಪಡಿಸಿಲ್ಲ ಎಂದು ಡಾ.ರೆಡ್ಡಿ ಹೇಳಿದರು.
 

SCROLL FOR NEXT