ದೇಶ

ಭಾರತದಲ್ಲಿ ವ್ಯಾಪಕವಾಗಿರುವ ಕೊರೋನಾ ರೂಪಾಂತರಿ ವೈರಸ್ 44 ದೇಶಗಳಲ್ಲಿ ಪತ್ತೆ: ವಿಶ್ವ ಆರೋಗ್ಯ ಸಂಸ್ಥೆ

Srinivasamurthy VN

ವಾಷಿಂಗ್ಟನ್: ಕಳೆದ ವರ್ಷ ಅಕ್ಟೋಬರ್‌ನಲ್ಲಿ ಭಾರತದಲ್ಲಿ ಮೊದಲ ಬಾರಿಗೆ ಕಂಡುಬಂದ ಕೋವಿಡ್-19 ವೈರಸ್ ನ B.1.617 ರೂಪಾಂತರವು ಜಗತ್ತಿನ 44 ದೇಶಗಳಲ್ಲಿ ಪತ್ತೆಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಬುಧವಾರ ತಿಳಿಸಿದೆ.

ವಿಶ್ವ ಆರೋಗ್ಯ ಸಂಸ್ಥೆಯ 6 ಕೇಂದ್ರಗಳಲ್ಲಿ ದಾಖಲಾದ ದತ್ತಾಂಶಗಳ ಅನ್ವಯ ಜಗತ್ತಿನ 44 ದೇಶಗಳಲ್ಲಿ ಈ ರೂಪಾಂತರಿ ವೈರಸ್ ತಳಿಯು ಪತ್ತೆಯಾಗಿದೆ ಎಂದು ತಿಳಿದುಬಂದಿದೆ. ಈ ಕುರಿತಂತೆ ಮಾಹಿತಿ ನೀಡಿರುವ ವಿಶ್ವ ಆರೋಗ್ಯ ಸಂಸ್ಥೆ, 'ಮೇ 11 ರ ಹೊತ್ತಿಗೆ, 4500 ಕ್ಕೂ ಹೆಚ್ಚು ಅನುಕ್ರಮಗಳನ್ನು  GISAID (ಇನ್ಫ್ಲುಯೆನ್ಸಕ್ಕಾಗಿ ಡೇಟಾ ಹಂಚಿಕೆ ಕಾರ್ಯವಿಧಾನದ ವೇದಿಕೆ) ಗೆ ಅಪ್‌ಲೋಡ್ ಮಾಡಲಾಗಿದ್ದು, ಎಲ್ಲಾ ಆರು ವಿಶ್ವ ಆರೋಗ್ಯ ಸಂಸ್ಥೆಯ ಪ್ರದೇಶಗಳಲ್ಲಿನ 44 ದೇಶಗಳಲ್ಲಿ ಕೊರೋನಾ ವೈರಸ್ ನ B.1.617 ತಳಿ ಪತ್ತೆಯಾಗಿದೆ. ಅಂತೆಯೇ ಐದು ಹೆಚ್ಚುವರಿ ದೇಶಗಳಿಂದ ಈ ತಳಿ ಪತ್ತೆ  ಹಚ್ಚುವಿಕೆಯ ವರದಿಗಳನ್ನು ಸ್ವೀಕರಿಸಲಾಗಿದೆ ಎಂದು ತಿಳಿದುಬಂದಿದೆ.

ಈ ಕುರಿತಂತೆ ಮಾತನಾಡಿರುವ ವಿಶ್ವ ಆರೋಗ್ಯ ಸಂಸ್ಥೆಯ ಹಿರಿಯ ಅಧಿಕಾರಿಯೊಬ್ಬರು, 'ಐದು ಹೆಚ್ಚುವರಿ ದೇಶಗಳಿಂದ ಪತ್ತೆಯಾದ ವರದಿಗಳನ್ನು ಸ್ವೀಕರಿಸಿದೆ. ಕಳೆದ ವರ್ಷ ಭಾರತದಲ್ಲಿ ಮೊದಲು ಗುರುತಿಸಲ್ಪಟ್ಟ ಕೊರೋನ ವೈರಸ್ ರೂಪಾಂತರ ಬಿ .1.617 ಅನ್ನು "ಜಾಗತಿಕ ಆತಂಕಕಾರಿ ರೂಪಾಂತರ" ಎಂದು  ವರ್ಗೀಕರಿಸಲಾಗಿದೆ. ಅಂತೆಯೇ ಕೆಲವು ಪ್ರಾಥಮಿಕ ಅಧ್ಯಯನಗಳು ಇದು ಅತ್ಯಂತ ಸುಲಭವಾಗಿ ಹರಡುತ್ತದೆ ಎಂದು ಹೇಳಿವೆ ಎಂದು ಹೇಳಿದ್ದಾರೆ. 

ಇದೇ ವಿಚಾರವಾಗಿ ಮಾತನಾಡಿರುವ ವಿಶ್ವ ಆರೋಗ್ಯ ಸಂಸ್ಥೆಯ ಕೋವಿಡ್-19 ವಿಭಾಗದ ತಾಂತ್ರಿಕ ಮುಖ್ಯಸ್ಥರಾದ ಡಾ.ಮರಿಯಾ ವ್ಯಾನ್ ಕೆರ್ಖೋವ್ ಅವರು, 'ಭಾರತದಲ್ಲಿ ಮೊದಲು ಗುರುತಿಸಲ್ಪಟ್ಟ ಬಿ.1.617 ವೈರಸ್ ರೂಪಾಂತರಿ ತಳಿಯನ್ನು ಡಬ್ಲ್ಯುಎಚ್‌ಒ ಅತಂಕಕಾರಿ ಅತ್ಯಂತ ಕಳವಳಕಾರಿ ರೂಪಾಂತರವೆಂದು ವರ್ಗೀಕರಿಸಿದೆ. ಈ ಬಿ 1617 ರೂಪಾಂತರ ಮತ್ತು ಎಲ್ಲಾ ಉಪ-ವಂಶಾವಳಿಗಳ ಬಗ್ಗೆ ಡಬ್ಲ್ಯುಎಚ್‌ಒಗೆ ಹೆಚ್ಚಿನ ಮಾಹಿತಿ ಬೇಕು. "ನಮ್ಮ ತಂಡಗಳು ಮತ್ತು ನಮ್ಮ ಲ್ಯಾಬ್ ತಂಡಗಳು ಆಂತರಿಕವಾಗಿ, ಬಿ 1617 ತಳಿಯ ಹೆಚ್ಚಿನ ಪ್ರಸರಣಕ್ಕೆ ಕಾರಣವಾದ ಅಂಶಗಳ ಕುರಿತು ಮಾಹಿತಿ  ಸಂಗ್ರಹಿಸುತ್ತಿವೆ. ಪ್ರಸ್ತುತ ಲಭ್ಯವಾಗಿರುವ ದತ್ತಾಂಶಗಳ ಅನ್ವಯ ಇದನ್ನು ಜಾಗತಿಕ ಮಟ್ಟದಲ್ಲಿ ಕಳವಳಕಾರಿ ರೂಪಾಂತರವೆಂದು ವರ್ಗೀಕರಿಸುತ್ತಿದ್ದೇವೆ" ಎಂದು ಅವರು ಹೇಳಿದರು.

ಅಂತೆಯೇ ಕೊರೋನಾ ವೈರಸ್ ನ B.1.617 ರೂಪಾಂತರವು "ಜಾಗತಿಕ ಕಳವಳಕಾರಿ" ಎಂದು ಗೊತ್ತುಪಡಿಸಿದ ನಾಲ್ಕನೇ ರೂಪಾಂತರವಾಗಿದೆ. 

SCROLL FOR NEXT