ದೇಶ

ಆ್ಯಂಟಿ ವೈರಲ್ ಔಷಧಿ ವಿತರಣೆ: ಬಿಜೆಪಿ ಸಂಸದ ಗಂಭೀರ್ ರಿಂದ ವಿವರಣೆ ಕೋರಿದ ದೆಹಲಿ ಪೊಲೀಸ್

Srinivasamurthy VN

ಬೆಂಗಳೂರು: ತಮ್ಮ ಕಚೇರಿಯಲ್ಲಿ ಆ್ಯಂಟಿ ವೈರಲ್ ಔಷಧಿ ವಿತರಣೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಬಿಜೆಪಿ ಸಂಸದ ಗೌತಮ್ ಗಂಭೀರ್ ಅವರಿಂದ ದೆಹಲಿ ಪೊಲೀಸರು ವಿವರ ಕೋರಿದ್ದಾರೆ.

ಮೂಲಗಳ ಪ್ರಕಾರ ಗೌತಮ್ ಗಂಭೀರ್ ಅವರ ತಮ್ಮ ಕಚೇರಿಯಲ್ಲಿ ಆಂಟಿವೈರಲ್ ಔಷಧಿ ಫ್ಯಾಬಿಫ್ಲು ಅನ್ನು ಸಂಗ್ರಹಿಸಿ ವಿತರಿಸಿದ್ದಾರೆ ಎಂಬ ವರದಿಗಳ ಮೇರೆಗೆ ದೆಹಲಿ ಪೊಲೀಸರು ಪ್ರತಿಕ್ರಿಯೆ ಕೋರಿದ್ದಾರೆ. ದೆಹಲಿಯಲ್ಲಿ ಕೋವಿಡ್ ಸಾಂಕ್ರಾಮಿಕದಿಂದಾಗಿ ಆಂಟಿವೈರಲ್ ಔಷಧಿ ಫ್ಯಾಬಿಫ್ಲುಗೆ ತೀವ್ರ ಕೊರತೆ ಇದ್ದು,  ಇದರ ಅಕ್ರಮ ಸಂಗ್ರಹಣೆ ಅಥವಾ ದಾಸ್ತಾನಿನ ಕುರಿತು ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದಾರೆ. ಇದೇ ಔಷಧಿಯ ವಿತರಣೆ ಮಾಡಿದ್ದ ಗಂಭೀರ್ ಅವರನ್ನು ಪೊಲೀಸರು ಪ್ರಶ್ನಿಸಿದ್ದಾರೆ.

ಇನ್ನು ಇದೇ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಸಂಸದ ಗೌತಮ್ ಗಂಭೀರ್, 'ನಾವು ಎಲ್ಲಾ ವಿವರಗಳನ್ನು ಒದಗಿಸಿದ್ದೇವೆ. ನಾನು ದೆಹಲಿ ಹಾಗೂ ಅದರ ಜನರಿಗೆ ಯಾವಾಗಲೂ ನನ್ನ ಅತ್ಯುತ್ತಮ ಸಾಮರ್ಥ್ಯದೊಂದಿಗೆ ಸೇವೆ ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ.

ಇನ್ನು ಇದಕ್ಕೂ ಮೊದಲು ಶುಕ್ರವಾರ, ದೆಹಲಿ ಪೊಲೀಸ್ ಅಪರಾಧ ವಿಭಾಗದ ಅಧಿಕಾರಿಗಳು ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್ ಬಿ.ವಿ ಅವರನ್ನು ಕೋವಿಡ್ ಪರಿಹಾರ ಕಾರ್ಯಗಳಿಗೆ ಸಂಬಂಧಿಸಿದಂತೆ ಪ್ರಶ್ನಿಸಿದ್ದರು. ಗೌತಮ್ ಗಂಭೀರ್ ಹಾಗೂ ಶ್ರೀನಿವಾಸ್ ಬಿ.ವಿ ಅವರಲ್ಲದೆ ದೆಹಲಿ ಪೊಲೀಸರು ಬಿಜೆಪಿ ವಕ್ತಾರ  ಹರೀಶ್ ಖುರಾನಾ ಅವರನ್ನು ಕೋವಿಡ್-19 ಪರಿಹಾರ ಸಾಮಗ್ರಿಗಳ ವಿತರಣೆಗೆ ಸಂಬಂಧಿಸಿದಂತೆ ಪ್ರಶ್ನಿಸಿದ್ದಾರೆ.

SCROLL FOR NEXT