ದೇಶ

ಉತ್ತರ ಪ್ರದೇಶ: ಗಂಗಾ ನದಿ ತೀರದ ಮರಳಿನಲ್ಲಿ ಹೂತಿರುವ ಶವಗಳ ಪತ್ತೆ! 

Nagaraja AB

ಪ್ರಯಾಗ್ ರಾಜ್: ಉತ್ತರ ಪ್ರದೇಶದ ಪ್ರಯಾಗ್ ರಾಜ್ ಜಿಲ್ಲೆಯಲ್ಲಿನ ಗಂಗಾ ನದಿ ತೀರದ ಮರಳಿನಲ್ಲಿ ಹೂತಿರುವ ಹೆಚ್ಚಿನ ಸಂಖ್ಯೆಯ
ಶವಗಳು ಪತ್ತೆಯಾಗಿವೆ. ಇದು ಸುತ್ತಮುತ್ತಲ ಪ್ರದೇಶಗಳಲ್ಲಿ  ವಾಸಿಸುತ್ತಿರುವ ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ.

ಸಂಗಮ ಪ್ರದೇಶದಲ್ಲಿ ಮರಳಿನಲ್ಲಿ ಹೂತಿರುವ ಕೊಳೆತ ಅನೇಕ ಸಂಖ್ಯೆಯ ಮೃತದೇಹಗಳು ಕಾಣಿಸುತ್ತಿವೆ. ಕಳೆದ ಎರಡ್ಮೂರು ತಿಂಗಳುಗಳಿಂದ ಜನರು ಮೃತದೇಹಗಳನ್ನು ಇಲ್ಲಿಯೇ ಹೂಳುತ್ತಿದ್ದಾರೆ. ಬಿರುಗಾಳಿ ಬಂದಾಗ ಮರಳಿನಿಂದ ಮುಚ್ಚಿದ ಮೃತದೇಹಗಳು ಹಾರಿ ಹೋಗುತ್ತಿದ್ದು, ಕೊಳೆತ ಸ್ಥಿತಿಯಲ್ಲಿ ಮೃತದೇಹಗಳು ಕಾಣುತ್ತಿವೆ. ಹದ್ದು, ನಾಯಿ, ಪಕ್ಷಿಗಳು ಉಳಿದಿದ್ದನ್ನು ತಿನ್ನುತ್ತಿವೆ. ಸರ್ಕಾರ ಸೂಕ್ತ ಸ್ಮಶಾನದ ವ್ಯವಸ್ಥೆ ಮಾಡಬೇಕೆಂದು ಸ್ಥಳೀಯ ನಿವಾಸಿ ದಿನಾ ಯಾದವ್ ಎಂಬವರು ಎಎನ್ ಐ ಸುದ್ದಿಸಂಸ್ಥೆಗೆ ಹೇಳಿದ್ದಾರೆ.

ಈ ಸಾಂಕ್ರಾಮಿಕದ ಅವಧಿಯಲ್ಲಿ ಪರಿಸ್ಥಿತಿ ಕೆಟ್ಟದಾಗಿದ್ದು, ಸೋಂಕು ಒಬ್ಬರಿಂದ ಮತ್ತೊಬ್ಬರಿಗೆ ಹರಡುವುದರಿಂದ ಸರ್ಕಾರ ಎಚ್ಚರಿಕೆ ವಹಿಸಬೇಕು. ಜನರು  ಅಸಹಾಯಕರಾಗಿದ್ದಾರೆ.ಅನೇಕ ಜನರು ಬಡವರಾಗಿದ್ದು, ಅವರು ಸೂಕ್ತ ರೀತಿಯಲ್ಲಿ ಶವ  ಸಸಂಸ್ಕಾರ ಮಾಡಲು ಸಂಪನ್ಮೂಲದ ಕೊರತೆಯಿದೆ. ಸರ್ಕಾರ ಈ ವ್ಯವಸ್ಥೆಯನ್ನು ಸರಿಪಡಿಸಬೇಕೆಂದು ಮತ್ತೊಬ್ಬ ಸ್ಥಳೀಯ ನಿವಾಸಿ ಒತ್ತಾಯಿಸಿದ್ದಾರೆ.

ಈ ಸಮಸ್ಯೆ ಬಗೆಹರಿಸುವಂತೆ ಪದೇ ಪದೇ ಜಿಲ್ಲಾ ಅಧಿಕಾರಿಗಳಿಗೆ ದೂರು ನೀಡಿದ್ದರೂ , ಯಾವುದೇ ಪ್ರಯೋಜನವಾಗುತ್ತಿಲ್ಲ. ಪವಿತ್ರ ಗಂಗಾ ನದಿ ಬಗ್ಗೆ ಸ್ಥಳೀಯರು ಕಳವಳ ವ್ಯಕ್ತಪಡಿಸುತ್ತಿದ್ದಾರೆ.ಇತ್ತೀಚಿನ ದಿನಗಳಲ್ಲಿ ಬರುತ್ತಿರುವ ಕೆಟ್ಟ ವಾಸನೆಯಿಂದ ಭಕ್ತಾಧಿಗಳು ಗಂಗೆಯಲ್ಲಿ ಸ್ನಾನ ಮಾಡುವುದನ್ನು ನಿಲ್ಲಿಸಿದ್ದಾರೆ. ಕನಿಷ್ಠ 400ರಿಂದ 500 ಮೃತದೇಹಗಳನ್ನು  ಇಲ್ಲಿ ಹೂಳಲಾಗಿದೆ. ಸರ್ಕಾರ ಈ ವಿಚಾರದ ಬಗ್ಗೆ ಎಚ್ಚರ ವಹಿಸಬೇಕು ಎಂದು ಕುನ್ವಾರ್ ಜಿತ್ ತಿವಾರ್ ಹೇಳಿದ್ದಾರೆ.

ಉತ್ತರ ಪ್ರದೇಶದ ಉನ್ನಾವೋ ಜಿಲ್ಲೆಯಲ್ಲೂ ಇಂತಹದ್ದೇ ಚಿತ್ರಣ ಕಂಡುಬರುತ್ತಿದೆ. ಕಳೆದ ವಾರ ಗಾಜಿಪುರ್ ಮತ್ತು ಬಿಹಾರದ ಬುಕ್ಸಾರ್ ನಲ್ಲಿಯೂ ನದಿ ತೀರದಲ್ಲಿ ಮೃತದೇಹಗಳು ತೇಲುತ್ತಿದದ್ದು ಕಂಡುಬಂದಿತ್ತು ಅವುಗಳನ್ನು ಬೀದಿ ನಾಯಿಗಳು ಎಳೆದು ತಂದಿದ್ದವು. ಈ ಮೃತದೇಹಗಳು ಪ್ರಯಾಗ್ ರಾಜ್ ನಲ್ಲಿ ಕೋವಿಡ್-19 ರೋಗಿಗಳದ್ದಾ ಎಂಬ ಶಂಕೆಯು ವ್ಯಕ್ತವಾಗಿದೆ. ಕೋವಿಡ್-19 ಮೊದಲ ಅಲೆ ವೇಳೆ ಇಂತಹ ದೃಶ್ಯವನ್ನು ನೋಡಿರಲಿಲ್ಲ. ಎರಡನೇ ಅಲೆ ವೇಳೆಯಲ್ಲಿ ಇಂತಹ ಚಿತ್ರಣವನ್ನು ನೋಡುತ್ತಿರುವುದಾಗಿ ಸ್ಥಳೀಯರು ಹೇಳಿದ್ದಾರೆ.

SCROLL FOR NEXT