ದೇಶ

ಬಾರ್ಜ್ ದುರಂತ: 30 ಮೃತದೇಹಗಳ ಗುರುತು ಪತ್ತೆಗಾಗಿ ಡಿಎನ್ಎ ಪರೀಕ್ಷೆ ಆರಂಭಿಸಿದ ಪೊಲೀಸರು!

Nagaraja AB

ಮುಂಬೈ: ಬಾರ್ಜ್ ಪಿ-305 ದುರಂತದಲ್ಲಿ ಮೃತಪಟ್ಟ 61 ಜನರ ಪೈಕಿ 30 ಮಂದಿಯ ಗುರುತು ಪತ್ತೆ ಹಚ್ಚಲು ಹರಸಾಹಸಪಡುತ್ತಿರುವ ಪೊಲೀಸರು, ಡಿಎನ್ಎ ಪರೀಕ್ಷೆ ಪ್ರಕ್ರಿಯೆ ಆರಂಭಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.

ನೌಕಪಡೆ ಈವರೆಗೂ ಅರಬಿಯನ್ ಸಮುದ್ರದಿಂದ 61 ಮೃತದೇಹಗಳನ್ನು ವಶಕ್ಕೆ ಪಡೆದಿದ್ದು, ಅವುಗಳನ್ನು ನಗರ ಪೊಲೀಸರ ವಶಕ್ಕೆ
ಹಸ್ತಾಂತರಿಸಿದೆ ಎಂದು ಮುಂಬೈ ಪೊಲೀಸರು ವಕ್ತಾರರೊಬ್ಬರು ತಿಳಿಸಿದ್ದಾರೆ. ಬಾರ್ಜ್ ಪಿ-305 ರ ಸೋಮವಾರ ಟೌಕ್ಟೇ ಚಂಡಮಾರುತದ ಹೊಡೆತಕ್ಕೆ ಸಿಲುಕಿ ಸೋಮವಾರ ಸಂಜೆ  ಮುಳುಗಿತ್ತು.

28 ಮೃತದೇಹಗಳನ್ನು ಮರಣೋತ್ತರ ಪರೀಕ್ಷೆ ನಂತರ ಅವರ ಕುಟುಂಬಸ್ಥರಿಗೆ ಪೊಲೀಸರು ಹಸ್ತಾಂತರಿಸಿದ್ದಾರೆ. ಆದಾಗ್ಯೂ, 30 ಮೃತದೇಹಗಳ ಗುರುತು ಇನ್ನೂ ಪತ್ತೆಯಾಗಿಲ್ಲ. ಕೆಲ ಮೃತದೇಹಗಳು ಕೊಳೆತ ಸ್ಥಿತಿಯಲ್ಲಿದ್ದರೆ, ಮತ್ತೆ ಕೆಲವರಿಗೆ ತೀವ್ರವಾದ ಗಾಯಗಳಾಗಿವೆ. ಆದ್ದರಿಂದ ಗುರುತಿಸುವಿಕೆ ಕಷ್ಟವಾಗುತ್ತಿದೆ ಎಂದು ಅಧಿಕಾರಿ ಹೇಳಿದರು.

ಈ ಹಿನ್ನೆಲೆಯಲ್ಲಿ ಮೃತದೇಹಗಳ ಡಿಎನ್ ಎ ಪರೀಕ್ಷೆ ನಡೆಸಲು ಪೊಲೀಸರು ನಿರ್ಧರಿಸಿದ್ದಾರೆ. ಮೃತರ ರಕ್ತದ ಮಾದರಿಗಳನ್ನು ಸಂಗ್ರಹಿಸಿ, ಸಾಂತಕ್ರೂಜ್ ನ ಕಲಿನಾದಲ್ಲಿರುವ ವಿಧಿವಿಜ್ಞಾನ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಈ ಮಧ್ಯೆ, ನೌಕಪಡೆಯಿಂದ ನೀರಿನೊಳಗೆ ಬಾರ್ಜ್ ಹಡಗಿನ ಭಗ್ನಾವಶೇಷಗಳ ಹುಡುಕಾಟ ನಡೆಯುತ್ತಿದ್ದು, ಡೈವಿಂಗ್ ತಂಡಗಳನ್ನು ನಿಯೋಜಿಸಲಾಗಿದೆ ಎಂದು ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ.

SCROLL FOR NEXT