ದೇಶ

ಕೋವಿಡ್ ನಿಂದ ಅನಾಥರಾದ ಮಕ್ಕಳಿಗೆ ಯೋಜನೆ ರೂಪಿಸಿ: ಬಿಜೆಪಿ ಆಡಳಿತವಿರುವ ಸಿಎಂಗಳಿಗೆ ಜೆಪಿ ನಡ್ಡಾ ಸಲಹೆ

Nagaraja AB

ನವದೆಹಲಿ: ಕೋವಿಡ್-19 ಸಾಂಕ್ರಾಮಿಕದಿಂದ ಅನಾಥರಾದ ಮಕ್ಕಳ ಕಲ್ಯಾಣಕ್ಕಾಗಿ ಕಾರ್ಯಕ್ರಮವೊಂದನ್ನು ರೂಪಿಸುವಂತೆ ಬಿಜೆಪಿ ಆಡಳಿತವಿರುವ ರಾಜ್ಯಗಳಿಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ ಸಲಹೆ ನೀಡಿದ್ದಾರೆ. ಅದು ಮೋದಿ ಸರ್ಕಾರ ಅಧಿಕಾರಕ್ಕೆ ಬಂದು ಏಳು ವರ್ಷ ತುಂಬಲಿರುವ ಮೇ 30ರಂದು ಚಾಲನೆಯಾಗಬೇಕು ಎಂದು ಅವರು ಹೇಳಿದ್ದಾರೆ.

ಪಕ್ಷ ಆಡಳಿತವಿರುವ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರುವ ಜೆ. ಪಿ. ನಡ್ಡಾ , ಕೋವಿಡ್  ಸಾಂಕ್ರಾಮಿಕ ಸಂದರ್ಭದಿಂದಾಗಿ ವರ್ಷಾಚರಣೆ ಅಂಗವಾಗಿ ಯಾವುದೇ ಕಾರ್ಯಕ್ರಮ ನಡೆಸಬಾರದು, ಬದಲಿಗೆ ವಿವಿಧ ಕಲ್ಯಾಣ ಕಾರ್ಯಕ್ರಮಗಳನ್ನು ಚಾಲನೆಗೊಳಿಸುವ ಮೂಲಕ ಸೇವೆ ಮಾಡಲು ಬಿಜೆಪಿಗೆ ಅವಕಾಶ ಕೊಟ್ಟ ಜನರಿಗೆ ಕೃತಜ್ಞತೆ ಸಲ್ಲಿಸಬೇಕೆಂದು ತಿಳಿಸಿದ್ದಾರೆ.

ಕೋವಿಡ್ ಸಾಂಕ್ರಾಮಿಕ ಸಮಾಜ ಹಾಗೂ ದೇಶಕ್ಕೆ ತೀವ್ರ ನಷ್ಟವನ್ನುಂಟು ಮಾಡಿದ್ದು, ಕಾಯಿಲೆಯಿಂದಾಗಿ ಅನೇಕ ಮಕ್ಕಳು ತಮ್ಮ
ಪೋಷಕರನ್ನು ಕಳೆದುಕೊಂಡು ಅನಾಥರಾಗಿದ್ದಾರೆ. ಅವರ ಭವಿಷ್ಯವನ್ನು ನೋಡಿಕೊಳ್ಳುವುದು ಇದೀಗ ನಮ್ಮ ಜವಾಬ್ದಾರಿಯಾಗಿದೆ. ಈ ಸಂಬಂಧ ಸೂಕ್ತ ಹೆಜ್ಜೆ ತೆಗೆದುಕೊಳ್ಳುವಂತೆ ಮುಖ್ಯಮಂತ್ರಿಗಳಿಗೆ ಸೂಚಿಸಿದ್ದಾರೆ.

ಅಂತಹ ಮಕ್ಕಳು ಮತ್ತು ಅವರ ಕುಟುಂಬಗಳಿಗೆ ಸಹಾಯ ಮಾಡುವ ದೊಡ್ಡ ಯೋಜನೆಯ ಬಗ್ಗೆ ಶೀಘ್ರದಲ್ಲೇ ನಿರ್ದೇಶನಗಳನ್ನು 
ನೀಡಲಾಗುವುದು, ಅಗತ್ಯತೆಗಳು, ಪರಿಸ್ಥಿತಿ ಮತ್ತು ಆ ರಾಜ್ಯಗಳ ಸಂಪ್ರದಾಯಗಳನ್ನು ಗಮನದಲ್ಲಿಟ್ಟುಕೊಂಡು ಕಾರ್ಯಕ್ರಮದ ಕರಡು ಸಿದ್ಧಪಡಿಸುವಂತೆ ಮುಖ್ಯಮಂತ್ರಿಗಳಿಗೆ ಹೇಳಿದರು.

ದೇಶದಲ್ಲಿ ಪ್ರಸ್ತುತ 12 ಬಿಜೆಪಿ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳಿದ್ದಾರೆ. ಕಳೆದ ವರ್ಷವೂ ಕೂಡಾ ಮೋದಿ ಸರ್ಕಾರ ವರ್ಷಾಚರಣೆ ಅಂಗವಾಗಿ ಯಾವುದೇ ದೊಡ್ಡ ಕಾರ್ಯಕ್ರಮಗಳನ್ನು ಆಯೋಜಿಸಿರಲಿಲ್ಲ. ಈ ಶತಮಾನದಲ್ಲಿ ಇಂತಹ ಬಿಕ್ಕಟ್ಟನ್ನು ವಿಶ್ವ ನೋಡಿರಲಿಲ್ಲ. ಜಾಗತಿಕ ಸಾಂಕ್ರಾಮಿಕ ಭಾರತ ಮಾತ್ರವಲ್ಲದೇ ಇಡೀ ವಿಶ್ವದಾದ್ಯಂತ ಪರಿಣಾಮ ಬೀರಿದೆ. ಇದು ದೇಶದ ಮುಂದೆ ಅನೇಕ ಸವಾಲುಗಳನ್ನು ಸೃಷ್ಟಿಸಿದೆ. ದೇಶ ಅದನ್ನು ಪರಿಹರಿಸುವ ದೃಢ ಸಂಕಲ್ಪದೊಂದಿಗೆ ಹೋರಾಡುತ್ತಿರುವುದಾಗಿ ಜೆ. ಪಿ. ನಡ್ಡಾ ಪತ್ರದಲ್ಲಿ ತಿಳಿಸಿದ್ದಾರೆ.

SCROLL FOR NEXT