ದೇಶ

ಅಲೋಪತಿ ಕುರಿತ ಹೇಳಿಕೆ ಹಿಂಪಡೆಯುವಂತೆ ರಾಮ್ ದೇವ್ ಗೆ ಕೇಂದ್ರ ಸಚಿವ ಹರ್ಷವರ್ಧನ್ ಸೂಚನೆ

Nagaraja AB

ನವದೆಹಲಿ: ಅಲೋಪತಿ ಕುರಿತ ಯೋಗ ಗುರು ರಾಮ್ ದೇವ್ ಅವರ ಹೇಳಿಕೆ ದುರಾದೃಷ್ಟಕರವಾಗಿದ್ದು, ಅದನ್ನು ಹಿಂಪಡೆಯುವಂತೆ
ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್, ರಾಮದೇವ್ ಅವರಿಗೆ ಹೇಳಿದ್ದಾರೆ.

ಅಲೋಪತಿ' ಸ್ಟುಪಿಡ್ ಸೈನ್ಸ್' ಮತ್ತು ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ ಅನುಮೋದಿಸಲ್ಪಟ್ಟಿರುವ ರೆಮಿಡಿಸಿವಿರ್, 
ಫೆವಿಫ್ಲು ಮತ್ತಿತರ ಔಷಧಗಳು, ಕೋವಿಡ್-19 ರೋಗಿಗಳ ಚಿಕಿತ್ಸೆಯಲ್ಲಿ ವಿಫಲವಾಗಿವೆ ಎಂದು ರಾಮ್ ದೇವ್ ಹೇಳಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಅಲೋಪತಿ ಔಷಧದಿಂದ ಲಕ್ಷಾಂತರ ರೋಗಿಗಳು ಸಾವನ್ನಪ್ಪಿದ್ದಾರೆ ಎಂದು ರಾಮ್ ದೇವ್ ಹೇಳಿರುವುದಾಗಿ ಭಾರತೀಯ ವೈದ್ಯಕೀಯ ಸಂಘ ಹೇಳಿತ್ತು. ಆದರೆ, ಈ  ಹೇಳಿಕೆಯನ್ನು ಹರಿದ್ವಾರ ಮೂಲದ ಪಂತಜಲಿ ಯೋಗಪೀಠ ಟ್ರಸ್ಟ್ ನಿರಾಕರಿಸಿದೆ.

ಈ ಸಂಬಂಧ ರಾಮ್ ದೇವ್ ಅವರಿಗೆ ಪತ್ರ ಬರೆದಿರುವ ಹರ್ಷವರ್ಧನ್, ಅಲೋಪತಿ ಕುರಿತ ತಮ್ಮ ಹೇಳಿಕೆಯನ್ನು
ಹಿಂಪಡೆಯುವಂತೆ ಸೂಚಿಸಿದ್ದಾರೆ. ಈ ಹೇಳಿಕೆ ಕೊರೋನಾ ವಾರಿಯರ್ಸ್ ಹಾಗೂ ದೇಶದ  ಭಾವನೆಗಳಿಗೆ ಅಪಮಾನಿಸಿದೆ. ಅಲೋಪತಿ ಕುರಿತ ನಿಮ್ಮ ಹೇಳಿಕೆಯು ಆರೋಗ್ಯ ಕಾರ್ಯಕರ್ತರ ಆತ್ಮಸ್ಥೈರ್ಯಕ್ಕೆ ಧಕ್ಕೆ ತರುತ್ತಿದೆ. ಕೋವಿಡ್ ವಿರುದ್ಧದ ನಮ್ಮ ಹೋರಾಟವನ್ನು ದುರ್ಬಲಗೊಳಿಸುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಅಲೋಪತಿ ಔಷಧ ಕೋಟ್ಯಂತರ ಜನರ ಜೀವವನ್ನು ಉಳಿಸಿದೆ. ಲಕ್ಷಾಂತರ ಜನರ ಸಾವಿಗೆ ಅಲೋಪತಿ ಕಾರಣ ನಿಮ್ಮ ಹೇಳಿಕೆ ದುರಾದೃಷ್ಟಕರ ಸಂಗತಿ ಎಂದು ಹರ್ಷವರ್ಧನ್ ಹೇಳಿದ್ದಾರೆ.

SCROLL FOR NEXT